ಬೆಂಗಳೂರು: ಸರ್ಕಾರಕ್ಕೆ ಮುಜುಗರ ತರುವ ಮತ್ತು ಸರ್ಕಾರಕ್ಕೆ ವಿರುದ್ಧವಾದಂತಹ ಸಂದೇಶಗಳನ್ನು ಕೆಲವು ಸರ್ಕಾರಿ ನೌಕರರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್, ಶೇರ್ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅಂತಹ ಖಾತೆಗಳ ಮೇಲೆ ಕಣ್ಣಿಡಲು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದ್ದು, ಯಾರೂ ರಾಜಕೀಯ ಕುರಿತು ಚರ್ಚೆಗಳನ್ನು ಜಾಲತಾಣಗಳಲ್ಲಿ ಮಾಡಬೇಡಿ ಎಂದು ಸರ್ಕಾರಿ ನೌಕರರ ಕೆಲವು ವಾಟ್ಸಾಪ್ ಗುಂಪುಗಳಲ್ಲಿ ಸಂದೇಶ ಹರಿದಾಡುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರಿ ನೌಕರರು ಮನಸ್ಸಿಗೆ ಬಂದಂತೆ ಸಿಕ್ಕಸಿಕ್ಕ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದು, ಇಂತವುಗಳ ಬಗ್ಗೆ ಎಚ್ಚರಕೆ ವಹಿಸಬೇಕೆಂದು ಹೇಳಲಾಗಿದೆ.
ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್, ಟ್ವಿಟರ್, ಟೆಲಿಗ್ರಾಂ ಮೊದಲಾದ ಜಾಲತಾಣಗಳಲ್ಲಿ ಕೆಲವು ನೌಕರರು ಸರ್ಕಾರದ ವಿರುದ್ಧ ಪೋಸ್ಟ್ ಹಾಕುತ್ತಿದ್ದಾರೆ. ಕೆಲವರು ಎನ್.ಪಿ.ಎಸ್. ವಿರುದ್ಧದ ಹೋರಾಟ, ಪುಣ್ಯಕೋಟಿ ಯೋಜನೆಗೆ ದೇಣಿಗೆ ಸಂಗ್ರಹ ಮೊದಲಾದ ವಿಚಾರಗಳ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಪೋಸ್ಟ್ ಹಾಕಿದ್ದಾರೆ ಎನ್ನಲಾಗಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಅಂತಹ ಖಾತೆಗಳ ಮೇಲೆ ನಿಗಾ ವಹಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ, ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಮತ್ತು ದ್ವೇಷ ಭಾವನೆ ಮೂಡಿಸುವಂತಹ ಪ್ರಚೋದನಕಾರಿ ಪೋಸ್ಟ್ ಹಾಕುವವರ ಮತ್ತು ಅಂತಹ ಸಂದೇಶಗಳನ್ನು ಫಾರ್ವರ್ಡ್ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.