
ಕೊಪ್ಪಳ: ನವೆಂಬರ್ ಅಂತ್ಯಕ್ಕೆ 7ನೇ ವೇತನ ಆಯೋಗ ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 7ನೇ ವೇತನ ಆಯೋಗ ವರದಿ ನವೆಂಬರ್ ಅಂತ್ಯಕ್ಕೆ ಸಲ್ಲಿಕೆಯಾಗುವ ಸಾಧ್ಯತೆಯಿದ್ದು, ಅದನ್ನು ರಾಜ್ಯ ಸರ್ಕಾರ ಜಾರಿಗೊಳಿಸುವ ಮೂಲಕ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ವೇತನ ಆಯೋಗ ಸಂಪೂರ್ಣ ವರದಿ ಸಲ್ಲಿಕೆಗೆ ಮುಂದಾಗಿದೆ. ಮತ್ತೆ ಕಾಲಾವಕಾಶ ವಿಸ್ತರಿಸುವ ಸಾಧ್ಯತೆ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೌಕರರ ಪರವಾಗಿದ್ದಾರೆ. ಅವರು ಹಿಂದೆ ಮುಖ್ಯಮಂತ್ರಿ ಆಗಿದ್ದ ವೇಳೆ ಆರನೇ ವೇತನ ಆಯೋಗ ಜಾರಿ ಮಾಡಿ ಶೇಕಡ 30ರಷ್ಟು ವೇತನ ಹೆಚ್ಚಳ ಮಾಡಲಾಗಿತ್ತು. ಈ ಬಾರಿಯೂ ವೇತನ ಹೆಚ್ಚಿನ ಮಾಡುವ ನಂಬಿಕೆ ಇದೆ. ವೇತನ ಆಯೋಗ ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದೆ. ನಾವು ಶೇಕಡ 40ರಷ್ಟು ಕೇಳಿದ್ದೇವೆ. ಅವರು ಎಷ್ಟು ಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. 7ನೇ ವೇತನ ಆಯೋಗ ವರದಿ ಆಧಾರದ ಮೇಲೆ ವೇತನ ಹೆಚ್ಚಳ ನಿರ್ಧಾರವಾಗುತ್ತದೆ ಎಂದು ತಿಳಿಸಿದ್ದಾರೆ.