ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಪ್ರತಿ ವರ್ಷ ಡಿಸೆಂಬರ್ ಅಂತ್ಯದೊಳಗೆ ಆಸ್ತಿ ವಿವರ ಸಲ್ಲಿಸಬೇಕಿದ್ದು, ಇದನ್ನು ಮಾರ್ಚ್ ಅಂತ್ಯಕ್ಕೆ ಎಂದು ಬದಲಾವಣೆ ಮಾಡಲಾಗಿದೆ.
ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರು ಮಾರ್ಚ್ ಅಂತ್ಯಕ್ಕೆ ತಮ್ಮ ಹಾಗೂ ಕುಟುಂಬದವರ ಆಸ್ತಿ ವಿವರ ಸಲ್ಲಿಸಬಹುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಸಿವಿಲ್ ಸೇವೆಗಳು(ನಡತೆ) ನಿಯಮಗಳ ತಿದ್ದುಪಡಿಗೆ ಅನುಮೋದನೆ ನೀಡಲಾಗಿದೆ.
ಸರ್ಕಾರಿ ನೌಕರರು ತಮ್ಮ ಮತ್ತು ಕುಟುಂಬದ ಆಸ್ತಿ ಮತ್ತು ಹೊಣೆಗಾರಿಕೆಗಳ ವಾರ್ಷಿಕ ಮಾಹಿತಿಯನ್ನು ಪ್ರತಿ ವರ್ಷ ಡಿಸೆಂಬರ್ 31ರೊಳಗೆ ಸರ್ಕಾರಕ್ಕೆ ಸಲ್ಲಿಸಬೇಕಿದೆ. ಪ್ರಸ್ತುತ ಇರುವ ಸೇವಾ ನಿಯಮದ ಪ್ರಕಾರ ಡಿಸೆಂಬರ್ 31ರೊಳಗೆ ಆಸ್ತಿ ವಿವರ ಸಲ್ಲಿಕೆ ಮಾಡಬೇಕಿದ್ದು, ಆದಾಯ ತೆರಿಗೆ ಪಾವತಿಗೆ ಮಾರ್ಚ್ 31 ಪರಿಗಣಿಸುವುದರಿಂದ ಸರ್ಕಾರಿ ನೌಕರರಿಗೂ ಆಸ್ತಿ ವಿವರ ಸಲ್ಲಿಕೆ ಅವಧಿಯನ್ನು ಮಾರ್ಚ್ 31ಕ್ಕೆ ಪರಿಗಣಿಸಬೇಕೆಂಬ ಸಲಹೆ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಕರ್ನಾಟಕ ರಾಜ್ಯ ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿ ತಂದು ಸರ್ಕಾರಿ ನೌಕರರ ಆಸ್ತಿ ವಿವರ ಸಲ್ಲಿಕೆಯನ್ನು ಮಾರ್ಚ್ 31ಕ್ಕೆ ಪರಿಗಣಿಸಲು ನಿರ್ಧರಿಸಲಾಗಿದೆ.
ರಾಜ್ಯ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಕೋಮು ಸಂಘಟನೆಗಳ ಸದಸ್ಯತ್ವ ಹೊಂದುವುದು, ಸಂಪರ್ಕ ಕಾಯ್ದುಕೊಳ್ಳುವುದನ್ನು ನಿರ್ಬಂಧಿಸುವ ಪ್ರಸ್ತಾವನೆಯನ್ನು ಮುಂದೂಡಲಾಗಿದ್ದು, ಇನ್ನಷ್ಟು ಸಮಗ್ರವಾಗಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ