ಬೆಂಗಳೂರು: ತಮ್ಮ ಸೇವಾವಧಿಯಲ್ಲಿ ಸರ್ಕಾರಿ ನೌಕರರು ಚರಾಸ್ತಿ ಮತ್ತು ಸ್ಥಿರಾಸ್ತಿ ಖರೀದಿಸುವ ಮೊದಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕು ಎಂಬ ನಿರ್ಬಂಧ ಸಡಿಲಿಸಲಾಗಿದೆ. ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಕಾಲಮಿತಿಯೊಳಗೆ ಸಂಬಂಧಿಸಿದ ಪ್ರಾಧಿಕಾರಕ್ಕೆ ವರದಿ ಮಾಡಲು ಅವಕಾಶ ಕಲ್ಪಿಸುವುದು ಸೇರಿದಂತೆ ಹಲವು ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ದೊರೆತಿದೆ.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಮಿತಾ ಪ್ರಸಾದ್ ಅಧ್ಯಕ್ಷತೆಯಲ್ಲಿ ಡಿಪಿಎಆರ್ ಕಾರ್ಯದರ್ಶಿ ಮನೀಶ್ ಮೌದ್ಗಿಲ್ ಮತ್ತು ಸದಸ್ಯ ಕಾರ್ಯದರ್ಶಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹಾಗೂ ವಿವಿಧ ಇಲಾಖೆಗಳ ಸದಸ್ಯರ ಸಮ್ಮುಖದಲ್ಲಿ ಗುರುವಾರ ರಾಜ್ಯಮಟ್ಟದ ಜಂಟಿ ಸಮಾಲೋಚನಾ ಸಮಿತಿ ನಡೆಸಲಾಗಿದ್ದು, ಕೆಲವು ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ.
ಸರ್ಕಾರಿ ನೌಕರರಿಗೆ ನಗದು ರಹಿತ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ತೀರ್ಮಾನಿಸಲಾಗಿದೆ.
ಪ್ರತಿ ತಿಂಗಳು ವೇತನ, ಭತ್ಯೆ ಸಕಾಲದಲ್ಲಿ ಪಾವತಿಯಾಗುವಂತೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಶಿಕ್ಷಣ ಇಲಾಖೆಯ ಸಮಗ್ರ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಪರಿಶೀಲನೆ ಹಂತದಲ್ಲಿದ್ದು, ಶೀಘ್ರವಾಗಿ ಅಂತಿಮಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಕೆಜಿಐಡಿ ವಿಮೆ ಪಾಲಿಸಿಗಳ ಮೆಚುರಿಟಿ ಅವಧಿ 55 ವರ್ಷವಿದ್ದು, ಅದನ್ನು 60 ವರ್ಷದವರೆಗೆ ವಿಸ್ತರಿಸಿ ವಿಮೆ ಸೌಲಭ್ಯ ಕಲ್ಪಿಸಲಾಗುತ್ತದೆ.
ಅದೇ ರೀತಿ ಜಿಪಿಎಫ್, ಉಳಿತಾಯ ಖಾತೆಗಳಿಂದ ಮುಂಗಡ ಮತ್ತು ಭಾಗಶಃ ವಾಪಸಾತಿ ಪಡೆಯುವ ಸಂದರ್ಭದಲ್ಲಿ ನಿಯಮಗಳನ್ನು ಸಡಿಲಿಕೆ ಮಾಡಲಾಗುವುದು.
ಆರು ತಿಂಗಳಿಗೆ ಒಂದು ಸಲ ಮುಂಬಡ್ತಿ ಕೋಟಾದ ಹುದ್ದೆಗಳನ್ನು ಗುರುತಿಸಿ ಪದೋನ್ನತಿ ನೀಡುವುದು ಸೇರಿದಂತೆ ಹಲವು ತೀರ್ಮಾನ ಕೈಗೊಳ್ಳಲಾಗಿದೆ.