ಬೆಂಗಳೂರು: ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಶೇಕಡ 40ರಷ್ಟು ಫಿಟ್ ಮೆಂಟ್ ನೀಡಬೇಕು ಎಂದು ಒತ್ತಾಯಿಸಿ ಮಾರ್ಚ್ 1 ರಿಂದ ಮುಷ್ಕರ ನಡೆಸಲು ಮುಂದಾಗಿರುವುದಾಗಿ ಸರ್ಕಾರಿ ನೌಕರರು ಎಚ್ಚರಿಕೆ ನೀಡಿರುವ ಬೆನ್ನಲ್ಲೇ 7ನೇ ವೇತನ ಆಯೋಗದಿಂದ ಮಧ್ಯಂತರ ವರದಿ ಪಡೆದು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ.
ವಿಧಾನಸಭೆ ಚುನಾವಣೆ ಸಮೀಪ ಇರುವಾಗ ಸರ್ಕಾರಿ ನೌಕರರು ಮುಷ್ಕರ ಕೈಗೊಂಡಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ 7ನೇ ವೇತನ ಆಯೋಗದಿಂದ ಮಧ್ಯಂತರ ವರದಿ ಪಡೆದು ಜನವರಿ 1 ರಿಂದ ಪೂರ್ವಾನ್ವಯವಾಗುವಂತೆ ಫಿಟ್ ಮೆಂಟ್ ನೀಡಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ವೇತನ ಆಯೋಗದಿಂದ ಮಧ್ಯಂತರ ವರದಿ ಪಡೆದು, ಸರ್ಕಾರಿ ನೌಕರರ ಬೇಡಿಕೆ ಈಡೇರಿಸುವ ಕುರಿತಾಗಿ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸರ್ಕಾರ ಫಿಟ್ ಮೆಂಟ್ ನೀಡಿದಲ್ಲಿ 6 ಲಕ್ಷ ಸರ್ಕಾರಿ ನೌಕರರು, 3 ಲಕ್ಷ ನಿಗಮ, ಮಂಡಳಿ, ಪ್ರಾಧಿಕಾರಗಳ ನೌಕರರು ಹಾಗೂ ಪಿಂಚಣಿ ಪಡೆಯುವ 4.5 ಲಕ್ಷ ನಿವೃತ್ತ ನೌಕರರು ಸೇರಿದಂತೆ ಸುಮಾರು 13.5 ಲಕ್ಷ ಸರ್ಕಾರಿ ನೌಕರರು ನಿವೃತ್ತ ನೌಕರರಿಗೆ ಅನುಕೂಲವಾಗುತ್ತದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸರ್ಕಾರಿ ನೌಕರರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಲು ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಇಂದು ಸಿಎಂ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.