ಬೆಂಗಳೂರು: ಸರಿಯಾದ ಸಿದ್ಧತೆ ಇಲ್ಲದೆ ಇ- ಖಾತೆ ಕಡ್ಡಾಯ ಮಾಡಲಾಗಿದ್ದು, ರಾಜ್ಯ ಸರ್ಕಾರ ಜಾರಿಗೊಳಿಸಿದ ಹೊಸ ವ್ಯವಸ್ಥೆಯಿಂದ ಆಸ್ತಿ ಮಾಲೀಕರಿಗೆ ಸಂಕಷ್ಟ ಎದುರಾಗಿದೆ.
ಆಸ್ತಿ ನೋಂದಣಿಯಾಗದೆ ಜನ ಹೈರಾಣಾಗಿದ್ದು, ಅಡಮಾನ ಸಾಲ ಪಡೆಯಲು ಕೂಡ ಅಡ್ಡಿಯಾಗಿದೆ. ರಾಜ್ಯದಾದ್ಯಂತ ಸರ್ವರ್ ಸಮಸ್ಯೆ ಉಂಟಾಗಿದ್ದು, ಸಮಸ್ಯೆ ಬಗೆಹರಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಸಮರ್ಪಕ ಸಿದ್ಧತೆ ಕೈಗೊಳ್ಳದೆ ರಾಜ್ಯದಾತ್ಯಂತ ದಸ್ತಾವೇಜು ನೋಂದಣಿಗೆ ಸರ್ಕಾರ ಇ-ಖಾತಾ ಕಡ್ಡಾಯಗೊಳಿಸಿರುವುದರಿಂದ ಆಸ್ತಿ ಮಾಲೀಕರು ತೊಂದರೆಗೆ ಸಿಲುಕಿದ್ದಾರೆ. ಸರ್ವರ್ ಸಮಸ್ಯೆ ಕಾರಣ, ಖಾತೆಗಳಲ್ಲಿನ ದೋಷ, ಅಗತ್ಯ ದಾಖಲೆಗಳ ಕೊರತೆ, ಇತರೆ ಕಾರಣದಿಂದ ಇ- ಖಾತೆ ದೊರೆಯದೆ ಆಸ್ತಿ ಮಾಲೀಕರು ಪರದಾಡುವಂತಾಗಿದೆ.
ಇ- ಖಾತೆ ಇಲ್ಲದೆ ಆಸ್ತಿ ನೋಂದಣಿ ಸಾಧ್ಯವಿಲ್ಲದ ಕಾರಣ ಸಾರ್ವಜನಿಕರು ಆಸ್ತಿ ನೋಂದಣಿ, ಅಡಮಾನ ಸಾಲ ಪಡೆಯುವುದು ಸೇರಿ ಯಾವುದೇ ವಹಿವಾಟು ನಡೆಸಲಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಕಂದಾಯ ನಿವೇಶನ ಮತ್ತು ಅದರಲ್ಲಿ ಮನೆ ನಿರ್ಮಿಸಿದವರಿಗೆ ಇ- ಖಾತೆ ಇಲ್ಲದೆ ಮಾಲೀಕತ್ವ ಸಾಬೀತುಪಡಿಸುವುದು ಹೇಗೆ? ಪರಭಾರೆ ಮಾಡುವುದು ಹೇಗೆ ಎನ್ನುವ ಆತಂಕ ಎದುರಾಗಿದೆ.
ಇತ್ತೀಚೆಗೆ ರಾಜ್ಯಾದ್ಯಂತ ಸ್ಥಿರಾಸ್ತಿ ನೋಂದಣಿಗೆ ಇ- ಖಾತೆಯನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಆನ್ಲೈನ್ ನಲ್ಲಿ ಇ- ಖಾತೆ ಪಡೆಯಬಹುದು, ಸರ್ಕಾರಿ ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ ಎಂದು ಕಂದಾಯ ಇಲಾಖೆ ಹೇಳಿದೆ. ಇ- ಖಾತೆ ಪಡೆಯಲು ವಿಧಿಸಿದ ಕಠಿಣ ನಿಯಮಗಳಿಂದಾಗಿ ಆನ್ಲೈನ್ ನಲ್ಲಿ ಖಾತೆ ಪಡೆಯಲಾಗದೆ ಜನರಿಗೆ ಸಮಸ್ಯೆ ಎದುರಾಗಿದೆ. ಆಸ್ತಿ ಮಾರಾಟ, ಖರೀದಿಗೆ ಇ- ಖಾತೆ ಬೇಕಿದ್ದು, ಅದನ್ನು ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದೆ.
ಇ-ಖಾತೆ ಕಡ್ಡಾಯ ಮಾಡಿದ ನಂತರವೂ ಇ- ಖಾತೆ ಇಲ್ಲದವರಿಗೆ ಇತರೆ ಕಾಲಂನಲ್ಲಿ ನಮೂದಿಸಿ ಆಸ್ತಿ ನೋಂದಣಿ ಮಾಡಲಾಗುತ್ತಿತ್ತು. ಈ ರೀತಿಯ ನೋಂದಣಿ ಈಗ ಸ್ಥಗಿತಗೊಳಿಸಲಾಗಿದ್ದು, ಅನೇಕ ಜಿಲ್ಲೆಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಿದೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಶೇಕಡ 90ರಷ್ಟು ಮನೆ ನಿವೇಶನಗಳಿಗೆ ಕಂದಾಯ ಇಲಾಖೆ ನಿಯಮದಡಿ ಇ- ಖಾತೆ ದೊರೆಯುವುದಿಲ್ಲ. ಅವರ ಆಸ್ತಿ ಪರಭಾರೆ ಕೂಡ ಕಷ್ಟವಾಗಿದೆ. ಇ- ಖಾತೆ ಕಡ್ಡಾಯದಿಂದಾಗಿ ಅನೇಕ ನೋಂದಣಿಗೆ ಸಮಸ್ಯೆಯಾಗಿದೆ ಎನ್ನಲಾಗಿದೆ.