ನವದೆಹಲಿ: 2023ರ ಆಗಸ್ಟ್ 23ರಂದು ವಿಕ್ರಮ್ ಲ್ಯಾಂಡರ್‌ನ ಲ್ಯಾಂಡಿಂಗ್ ಮತ್ತು ಚಂದ್ರನ ಮೇಲ್ಮೈಯಲ್ಲಿ ಪ್ರಜ್ಞಾನ್ ರೋವರ್‌ನ ನಿಯೋಜನೆಯೊಂದಿಗೆ ಚಂದ್ರಯಾನ-3 ಮಿಷನ್‌ನ ಯಶಸ್ಸಿನ ಸ್ಮರಣಾರ್ಥ ಕೇಂದ್ರ ಸರ್ಕಾರವು ಪ್ರತಿವರ್ಷ ಆಗಸ್ಟ್ 23 ಅನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಶನಿವಾರ ಘೋಷಿಸಿದೆ.
ಇಸ್ರೋದ ಚಂದ್ರಯಾನ-3 ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯುತ್ತಿದ್ದಂತೆ ಭಾರತವು ಐತಿಹಾಸಿಕ ಸಾಧನೆ ಮಾಡಿದ ಮೊದಲ ದೇಶವಾಗಿದೆ. ಯಶಸ್ವಿ ಚಂದ್ರಯಾನ-3 ಮಿಷನ್‌ನೊಂದಿಗೆ, ಯುಎಸ್, ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ನಂತರ ಭಾರತವು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡ ನಾಲ್ಕನೇ ದೇಶವಾಯಿತು.
ಐತಿಹಾಸಿಕ ಕ್ಷಣವನ್ನು ಸ್ಮರಿಸಲು ಆಗಸ್ಟ್ 23 “ರಾಷ್ಟ್ರೀಯ ಬಾಹ್ಯಾಕಾಶ ದಿನ”
ಗೆಜೆಟ್ ಅಧಿಸೂಚನೆಯಲ್ಲಿ, ಆಗಸ್ಟ್ 23 ಬಾಹ್ಯಾಕಾಶ ಯಾತ್ರೆಗಳಲ್ಲಿ ದೇಶದ ಪ್ರಗತಿಯಲ್ಲಿ ಪ್ರಮುಖ ಮೈಲಿಗಲ್ಲನ್ನು ಗುರುತಿಸುತ್ತದೆ, STEM(ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಮುಂದುವರಿಸಲು ಯುವ ಪೀಳಿಗೆಗೆ ಹೆಚ್ಚಿನ ಆಸಕ್ತಿ ಬೆಳೆಸುತ್ತದೆ ಎಂದು ಹೇಳಲಾಗಿದೆ.
ಚಂದ್ರಯಾನ 3 ಯಶಸ್ಸಿನ ಈ ಐತಿಹಾಸಿಕ ಕ್ಷಣವನ್ನು ಸ್ಮರಿಸಲು ಭಾರತ ಸರ್ಕಾರವು ಪ್ರತಿ ವರ್ಷದ ಆಗಸ್ಟ್ 23 ನೇ ದಿನವನ್ನು “ರಾಷ್ಟ್ರೀಯ ಬಾಹ್ಯಾಕಾಶ ದಿನ” ಎಂದು ಘೋಷಿಸಿದೆ ಎಂದು ತಿಳಿಸಲಾಗಿದೆ.
ಈ ಹಿಂದೆ, ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳನ್ನು ಭೇಟಿಯಾದಾಗ, ಆಗಸ್ಟ್ 23 ಅನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಆಚರಿಸಲಾಗುವುದು ಎಂದು ಘೋಷಿಸಿದರು.
ಆಗಸ್ಟ್ 29 ರಂದು, ಕೇಂದ್ರ ಸಚಿವ ಸಂಪುಟವು ಚಂದ್ರಯಾನ-3 ರ ಯಶಸ್ವಿ ಲ್ಯಾಂಡಿಂಗ್ ಅನ್ನು ಗುರುತಿಸುವ ಮೂಲಕ ಆಗಸ್ಟ್ 23 ಅನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಆಚರಿಸುವ ಪ್ರಸ್ತಾಪವನ್ನು ಅನುಮೋದಿಸಿತ್ತು. ಈಗ ಅಧಿಸೂಚನೆ ಹೊರಡಿಸಿದೆ.