ನವದೆಹಲಿ: ಭಾರತವು ತನ್ನ ಎಲ್ಲಾ ನಾಗರಿಕರಿಗೆ ಗೌಪ್ಯತೆ ಮೂಲಭೂತ ಹಕ್ಕು ಎಂದು ಖಚಿತಪಡಿಸುವಲ್ಲಿ ಬದ್ಧವಾಗಿದೆ ಎಂದು ಸರ್ಕಾರ ತಿಳಿಸಿದೆ.
ರಾಜಕಾರಣಿಗಳು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಬೇಹುಗಾರಿಕೆ ನಡೆಸಲಾಗಿದೆ ಎಂಬ ವರದಿಗಳ ಕುರಿತಾಗಿ ಸರ್ಕಾರ ಸ್ಪಷ್ಟನೆ ನೀಡಿದೆ.
ದಿ ಗಾರ್ಡಿಯನ್, ದಿ ವಾಷಿಂಗ್ಟನ್ ಪೋಸ್ಟ್ ಮತ್ತು ಭಾರತದ ದಿ ವೈರ್ ಸೇರಿದಂತೆ 17 ಮಾಧ್ಯಮ ಸಂಸ್ಥೆಗಳ ಒಕ್ಕೂಟದಿಂದ ಪೆಗಾಸಸ್ ಸ್ಪೈವೇರ್ ಫೋನ್ ಹ್ಯಾಕಿಂಗ್ ಸಾಫ್ಟ್ವೇರ್ ವಿಶ್ವದಾದ್ಯಂತ ಸಾವಿರಾರು ಜನರನ್ನು ಗುರಿಯಾಗಿಸಲು ಬಳಕೆ ಮಾಡಲಾಗಿದೆ. ಈ ಸಾಫ್ಟ್ವೇರ್ ಅನ್ನು ಇಸ್ರೇಲ್ ಮೂಲದ ಎನ್ಎಸ್ಒ ತಯಾರಿಸಿದ್ದು, ಇದನ್ನು ಸರ್ಕಾರಗಳಿಗೆ ಮಾತ್ರ ಸರಬರಾಜು ಮಾಡಲಾಗುತ್ತದೆ ಎಂದು ದೂರಲಾಗಿದೆ.
ಆದರೆ, ಇದನ್ನು ಅಲ್ಲಗಳೆದ ಭಾರತ ಸರ್ಕಾರ, ನಿರ್ದಿಷ್ಟ ಜನರ ಮೇಲೆ ಸರ್ಕಾರದ ಯಾವುದೇ ಕಣ್ಗಾವಲು ಇಲ್ಲ. ಇಂತಹ ಹೇಳಿಕೆಗಳನ್ನು ದೃಢಪಡಿಸುವ ಆಧಾರಗಳಿಲ್ಲ ಎಂದು ಹೇಳಿದೆ.
ಮಾತನಾಡುವುದು(ವಾಕ್ ಚಾತುರ್ಯ ಸ್ವಾತಂತ್ರ್ಯ) ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಭೂತ ಹಕ್ಕಾಗಿದೆ. ಮುಕ್ತ ಸಂವಾದದ ಸಂಸ್ಕೃತಿಗೆ ಒತ್ತು ನೀಡಿ ನಾಗರೀಕರ ಗೌಪ್ಯತೆಯನ್ನು ಕಾಪಾಡುವಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಹೇಳಲಾಗಿದೆ.
ಸರ್ಕಾರಿ ಸಂಸ್ಥೆಗಳಿಂದ ಯಾವುದೇ ಅನಧಿಕೃತ ಹಸ್ತಕ್ಷೇಪ ನಡೆದಿಲ್ಲ ಎಂದು ಹೇಳಲಾಗಿದ್ದು, ಸರ್ಕಾರಿ ಸಂಸ್ಥೆಗಳು ಪ್ರೋಟೋಕಾಲ್ ಗಳನ್ನು ಹೊಂದಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಉನ್ನತ ಶ್ರೇಣಿಯ ಅಧಿಕಾರಿಗಳಿಂದ ಅನುಮೋದನೆ ಮತ್ತು ಮೇಲ್ವಿಚಾರಣೆ ಒಳಗೊಂಡ ಸ್ಪಷ್ಟವಾದ ಕಾರಣಗಳಿಗಾಗಿ ಮತ್ತು ರಾಷ್ಟ್ರೀಯ ಹಿತಾಸಕ್ತಿಗಾಗಿ ಮಾತ್ರ ಎಂದು ಸರ್ಕಾರ ತಿಳಿಸಿದ್ದು, ಪ್ರತಿಬಂಧ, ಮೇಲ್ವಿಚಾರಣೆ ಪ್ರಕರಣಗಳನ್ನು ಪ್ರಾಧಿಕಾರ ಅಂಗೀಕರಿಸಿದೆ ಎಂದು ಹೇಳಲಾಗಿದೆ. ಪೆಗಾಸಸ್ ಸ್ಪೈವೇರ್ ಬಳಸಿ ಹ್ಯಾಕ್ ಮಾಡಲಾಗಿದೆ ಎಂಬ ವರದಿಯನ್ನು ತಳ್ಳಿ ಹಾಕಿದ್ದು, ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.