ನವದೆಹಲಿ: ಆಧಾರ್ ನೊಂದಿಗೆ ಪ್ಯಾನ್ ಲಿಂಕ್ ಮಾಡಲು ವಿಳಂಬ ಮಾಡಿದ್ದಕ್ಕಾಗಿ ಸರ್ಕಾರವು 600 ಕೋಟಿ ರೂಪಾಯಿಗಳನ್ನು ದಂಡವಾಗಿ ಸಂಗ್ರಹಿಸಿದೆ. ಸುಮಾರು 11.48 ಕೋಟಿ ಪ್ಯಾನ್ ಕಾರ್ಡ್ ಇನ್ನೂ ಬಯೋಮೆಟ್ರಿಕ್ ಗುರುತಿನೊಂದಿಗೆ ಲಿಂಕ್ ಆಗಿಲ್ಲ ಎಂದು ಸಂಸತ್ತಿನಲ್ಲಿ ಸೋಮವಾರ ತಿಳಿಸಲಾಗಿದೆ.
2024 ರ ಜನವರಿ 29 ರಂತೆ ವಿನಾಯಿತಿ ಪಡೆದ ವರ್ಗಗಳನ್ನು ಹೊರತುಪಡಿಸಿ ಆಧಾರ್‌ನೊಂದಿಗೆ ಲಿಂಕ್ ಮಾಡದ ಪ್ಯಾನ್‌ಗಳ ಸಂಖ್ಯೆ 11.48 ಕೋಟಿಯಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಬಯೋಮೆಟ್ರಿಕ್ ಆಧಾರ್‌ನೊಂದಿಗೆ PAN ಅನ್ನು ಲಿಂಕ್ ಮಾಡಲು ಜೂನ್ 30, 2023 ಕೊನೆಯ ದಿನಾಂಕವಾಗಿತ್ತು. ಒಬ್ಬ ವ್ಯಕ್ತಿಯು ಜೂನ್ 30, 2023 ರೊಳಗೆ ತಮ್ಮ ಆಧಾರ್ ಮತ್ತು PAN ಅನ್ನು ಲಿಂಕ್ ಮಾಡಲು ವಿಫಲರಾದರೆ ಮತ್ತು ನಂತರದ ದಿನಾಂಕದಲ್ಲಿ ಅದನ್ನು ಲಿಂಕ್ ಮಾಡಲು ಬಯಸಿದರೆ, ದಂಡವನ್ನು ಪಾವತಿಸಬೇಕಿದೆ.
ಜೂನ್ 30, 2023 ರ ಕೊನೆಯ ದಿನಾಂಕದ ನಂತರ ತಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದ ವ್ಯಕ್ತಿಗಳಿಂದ 1,000 ರೂಪಾಯಿಗಳ ದಂಡದ ಮೂಲಕ 601.97 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.
ತಮ್ಮ ಆಧಾರ್ ತಿಳಿಸಲು ವಿಫಲರಾದ ತೆರಿಗೆದಾರರ ಪ್ಯಾನ್ ಜುಲೈ 1, 2023 ರಿಂದ ನಿಷ್ಕ್ರಿಯವಾಗಿದ್ದು, ಅಂತಹ ಪ್ಯಾನ್‌ಗಳಿಗೆ ಯಾವುದೇ ಮರುಪಾವತಿಯನ್ನು ಮಾಡಲಾಗುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಅಲ್ಲದೆ, TDS ಮತ್ತು TCS ಅನ್ನು ಹೆಚ್ಚಿನ ದರದಲ್ಲಿ ಕಡಿತಗೊಳಿಸಲಾಗುತ್ತದೆ/ಸಂಗ್ರಹಿಸಲಾಗುತ್ತದೆ.
1,000 ರೂಪಾಯಿಗಳ ವಿಳಂಬ ಶುಲ್ಕವನ್ನು ಪಾವತಿಸುವ ಮೂಲಕ ಪ್ಯಾನ್ ಅನ್ನು ಮತ್ತೆ ಕಾರ್ಯಗತಗೊಳಿಸಬಹುದು.