ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವಿರುದ್ಧದ ದೂರಿಗೆ ಬಿಗಿ ನಿಯಮ ರೂಪಿಸಿದ್ದು, ಬೇನಾಮಿ ದೂರು ಬಂದರೆ ತನಿಖೆ ಇಲ್ಲ. ದೂರುದಾರರ ಹೆಸರು, ವಿಳಾಸ ಖಚಿತಪಡಿಸಿ ಅಗತ್ಯ ದಾಖಲೆ ಒದಗಿಸಿದರೆ ಮಾತ್ರ ತನಿಖೆ ಆದೇಶ ಹೊರಡಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದು, ಸರ್ಕಾರಿ ನೌಕರರ ಬೇಡಿಕೆಗೆ ಅಸ್ತು ಎಂದಿದ್ದಾರೆ.
ಸರ್ಕಾರಿ ನೌಕರರ ವಿರುದ್ಧ ದೂರು ನೀಡುವ ದೂರುದಾರರ ವಿಳಾಸ, ಹೆಸರು ಖಚಿತಪಡಿಸಿಕೊಂಡು ಅಗತ್ಯ ಪೂರಕ ದಾಖಲೆಗಳನ್ನು ಒದಗಿಸಿದ ನಂತರ ಪ್ರಾಥಮಿಕ ತನಿಖೆ ಪರಿಗಣಿಸುವ ತೀರ್ಮಾನ ಕೈಗೊಳ್ಳಲಾಗಿದೆ.
ನಕಲಿ ಹೆಸರು ಮತ್ತು ವಿಳಾಸ ಬಳಸಿಕೊಂಡು ನೌಕರರ ವಿರುದ್ಧ ಕೆಲವರು ಬೇನಾಮಿ ದೂರು ನೀಡುತ್ತಾರೆ. ಇದನ್ನು ಸ್ವೀಕರಿಸಿ ನೌಕರರ ವಿಚಾರಣೆ ನಡೆಸಲಾಗುತ್ತದೆ. ಈ ಕಾರಣದಿಂದ ದಕ್ಷ ಮತ್ತು ಪ್ರಾಮಾಣಿಕ ನೌಕರರಿಗೆ ತೊಂದರೆಯಾಗುತ್ತದೆ. ಅಲ್ಲದೇ, ಆಡಳಿತಾತ್ಮಕ ಸಮಸ್ಯೆಯಿಂದ ಸರ್ಕಾರಿ ಕೆಲಸಗಳಿಗೆ ಹಿನ್ನಡೆಯಾಗುತ್ತದೆ. ಇದನ್ನು ತಪ್ಪಿಸಬೇಕೆಂದು ಸರ್ಕಾರಿ ನೌಕರರ ಸಂಘದಿಂದ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಅವರು ಸೂಚನೆ ನೀಡಿದ್ದಾರೆ.