ಪಿಂಚಣಿ ವಿಚಾರವಾಗಿ 1972ರಿಂದ ಜಾರಿಯಲ್ಲಿದ್ದ ನಿಯಮವನ್ನ 50 ವರ್ಷಗಳ ಸತತ ಪ್ರಯತ್ನದ ಬಳಿಕ ಕೇಂದ್ರ ಸರ್ಕಾರ ಇದನ್ನ ಬದಲಾವಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಸರ್ಕಾರಿ ಪಿಂಚಣಿದಾರನನ್ನ ಸಂಗಾತಿ ಇಲ್ಲವೇ ಮಕ್ಕಳೇ ಕೊಲೆ ಮಾಡಿದ್ದಲ್ಲಿ ಪ್ರಕರಣ ಅಂತ್ಯವಾಗುವವರೆಗೂ ಇಂತಹ ಕುಟುಂಬಗಳಿಗೆ ಪಿಂಚಣಿ ಸಿಗುವಂತೆ ಮಾಡಲು ಈ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ.
ಈ ಹಿಂದಿನ ನಿಯಾಮವಳಿಗಳ ಪ್ರಕಾರ ಸರ್ಕಾರಿ ಪಿಂಚಣಿದಾರರನ್ನ ಸಂಗಾತಿ ಇಲ್ಲವೇ ಮಕ್ಕಳು ಕೊಲೆ ಮಾಡಿದ್ದಲ್ಲಿ ಇಂತಹ ಕುಟುಂಬಗಳಿಗೆ ಕೇಸ್ ತೀರ್ಪು ಬರುವವರೆಗೂ ಕುಟುಂಬ ಪಿಂಚಣಿ ಸೌಲಭ್ಯವನ್ನ ತಡೆಹಿಡಿಯಲಾಗುತ್ತಿತ್ತು. ಪಿಂಚಣಿಯ ನಾಮಿನಿಯೇ ಈ ಕೊಲೆ ಆರೋಪಿಯಾಗಿರುವ ಕಾರಣ ಯಾವುದೋ ದುರುದ್ದೇಶದಿಂದಲೇ ಕೊಲೆ ನಡೆಸಿರಬಹುದು ಎಂಬ ಗುಮಾನಿ ಹಿನ್ನೆಲೆ ಈ ನಿಯಮಾವಳಿ ಜಾರಿಯಲ್ಲಿತ್ತು.
ಒಂದು ವೇಳೆ ಕೊಲೆ ಕೇಸು ಸಾಬೀತಾದಲ್ಲಿ ಈ ಪಿಂಚಣಿಯು ಮುಂದಿನ ನಾಮಿನಿಗೆ ವರ್ಗಾವಣೆ ಆಗುತ್ತಿತ್ತು. ಆರೋಪಿ ದೋಷ ಮುಕ್ತ ಎಂದು ಸಾಬೀತಾದಲ್ಲಿ ಮೊದಲ ನಾಮಿನಿಗೇ ಪಿಂಚಣಿಯನ್ನ ನೀಡಲಾಗುತ್ತಿತ್ತು. ಆದರೆ ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಇಂತಹ ಕೊಲೆ ಪ್ರಕರಣಗಳ ವಿಚಾರಣೆಗಳು ದೀರ್ಘಾವಧಿ ಸಮಯದವರೆಗೆ ನಡೆಯುತ್ತದೆ. ಹೀಗಾಗಿ ವಿಚಾರಣೆ ಸಂದರ್ಭದಲ್ಲಿ ಕುಟುಂಬದ ಹೊರೆಯನ್ನ ಕಡಿಮೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಈ ಬದಲಾವಣೆ ಮಾಡಿದೆ.
ಜೂನ್ 16ರಂದು ಈ ನಿಯಮಾವಳಿಗಳಲ್ಲಿ ಬದಲಾವಣೆ ತಂದ ಕೇಂದ್ರ ಸರ್ಕಾರ, ಇಂತಹ ಕೇಸುಗಳಲ್ಲಿ ಮೊದಲ ನಾಮಿನಿಯ ಮೇಲೆ ಪಿಂಚಣಿದಾರನ ಕೊಲೆ ಮಾಡಿದ ಆರೋಪವಿದ್ದಲ್ಲಿ ಈ ಪಿಂಚಣಿ ಹಣವು ನೇರವಾಗಿ 2ನೇ ನಾಮಿನಿಗೆ ವರ್ಗವಾಗಲಿದೆ. ಅಂದರೆ ಮೃತರ ಮಕ್ಕಳು ಇಲ್ಲವೇ ಪೋಷಕರಿಗೆ ಈ ಹಣ ವರ್ಗಾವಣೆಯಾಗುತ್ತದೆ.
ಒಂದು ವೇಳೆ ಕೇಸು ಸಾಬೀತಾದಲ್ಲಿ ಈ ಪಿಂಚಣಿಯು ಇದೇ ರೀತಿ ಮುಂದುವರಿಯಲಿದೆ. ಆರೋಪಿ ದೋಷ ಮುಕ್ತ ಎಂದು ಸಾಬೀತಾದಲ್ಲಿ ಮೊದಲ ನಾಮಿನಿಯೇ ಕುಟುಂಬ ಪಿಂಚಣಿಗೆ ಅರ್ಹರಾಗುತ್ತಾರೆ. ಕಾನೂನು ವ್ಯವಹಾರಗಳ ಸಚಿವಾಲಯದೊಂದಿಗೆ ಚರ್ಚೆ ನಡೆಸಿ ಕುಟುಂಬ ಪಿಂಚಣಿಯನ್ನೇ ನಂಬಿರುವ ಕುಟುಂಬಗಳಿಗೆ ತೀರ್ಪು ಬರುವವರೆಗೂ ಜೀವನೋಪಾಯಕ್ಕೆ ಹಾನಿ ಉಂಟಾಗಬಾರದು ಎಂಬ ಕಾರಣಕ್ಕೆ ಈ ಐತಿಹಾಸಿಕ ಬದಲಾವಣೆ ಮಾಡಲಾಗಿದೆ.