ಪಾಕಿಸ್ತಾನ ಹಾಗೂ ಚೀನಾದಲ್ಲಿ ಪೌರತ್ವ ಪಡೆದಿರುವ ಭಾರತ ಮೂಲದ ಮಂದಿಗೆ ಸೇರಿದ ಆಸ್ತಿಗಳನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಭಾರತದ ಸರ್ಕಾರದ ಗೃಹ ಸಚಿವಾಲಯ ಮುಂದಾಗಿದೆ. ಶತ್ರು ದೇಶಗಳಲ್ಲಿ ಕಾಯಂ ಆಗಿ ವಾಸಿಸುತ್ತಿರುವವರಿಗೆ ದೇಶದಲ್ಲಿರುವ ಆಸ್ತಿಯ ಮೌಲ್ಯ ಒಂದು ಲಕ್ಷ ಕೋಟಿಗೂ ಹೆಚ್ಚಿದೆ.
ಶತ್ರುಗಳ ಆಸ್ತಿ ಎಂದು ಪರಿಗಣಿಸಲಾದ 12,611 ಸ್ವತ್ತುಗಳು ಭಾರತದಲ್ಲಿದ್ದು, ಅವುಗಳನ್ನು ಶತ್ರುವಿನ ಆಸ್ತಿ ಕಾಯಿದೆ ಅಡಿ ಭಾರತದ ಶತ್ರುಗಳ ಆಸ್ತಿಯ ಪಾಲಕ (ಸೆಪಿ) ಎಂಬ ಪ್ರಾಧಿಕಾರದ ಅಡಿ ಇವುಗಳನ್ನು ತರಲಾಗಿದೆ. ಆದರೆ ಈ ಆಸ್ತಿಗಳಲ್ಲಿ ಯಾವೊಂದನ್ನೂ ಇದುವರೆಗೂ ನಗದೀಕರಿಸುವ ಕಾರ್ಯಕ್ಕೆ ಸರ್ಕಾರ ಇನ್ನೂ ಮುಂದಾಗಿಲ್ಲ.
ಈ ನಿಟ್ಟಿನಲ್ಲಿ ಮಾರ್ಗಸೂಚಿಗಳಿಗೆ ಬದಲಾವಣೆ ತಂದಿರುವ ಕೇಂದ್ರ ಗೃಹ ಸಚಿವಾಲಯ ಶತ್ರುಗಳ ಆಸ್ತಿಗಳನ್ನು ತೆರವುಗೊಳಿಸುವ ಕೆಲಸವನ್ನು ಸಂಬಂಧಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಉಪ ಕಮಿಷನರ್‌ಗೆ ಆರಂಭಿಸುವ ಅಧಿಕಾರ ಕೊಟ್ಟಿದೆ. ಒಂದು ಕೋಟಿ ರೂ.ಗಿಂತ ಕಡಿಮೆ ಬೆಲೆಯ ಆಸ್ತಿಯನ್ನು ಪ್ರಾಶಸ್ತ್ಯದ ಆಧಾರದ ಮೇಲೆ ಆ ಆಸ್ತಿಯ ಸ್ವಾಧೀನದಲ್ಲಿರುವವರಿಗೆ ಮಾರಲು ನೋಡಲಾಗುವುದು. ಒಂದು ವೇಳೆ ಸ್ವಾಧೀನಾನುಭವದಲ್ಲಿರುವವರು ಈ ಆಸ್ತಿಯನ್ನು ಖರೀದಿ ಮಾಡದೇ ಇದ್ದಲ್ಲಿ ಮಾರ್ಗಸೂಚಿಯನುಸಾರ ಮಾರಾಟ ಮಾಡಲಾಗುವುದು.
1-100 ಕೋಟಿ ರೂ.ಗಳ ನಡವಿನ ಮೌಲ್ಯದ ಆಸ್ತಿಗಳಾದಲ್ಲಿ ಸೆಪಿ ಈ ಸ್ವತ್ತುಗಳನ್ನು ಇ-ಹರಾಜಿನ ಮೂಲಕ ಅಥವಾ ಕೇಂದ್ರ ಸರ್ಕಾರ ನಿರ್ಧರಿಸಿದ ಇತರೆ ಮಾರ್ಗಗಳಲ್ಲಿ ಮಾರಾಟ ಮಾಡಲಾಗುವುದು.
ಶತ್ರುಗಳಿಗೆ ಸೇರಿದ ಚಿನ್ನದಂಥ ಚರಾಸ್ತಿಗಳ ಮಾರಾಟದಿಂದ ಸರ್ಕಾರಕ್ಕೆ ಇದುವರೆಗೂ 3,400 ಕೋಟಿ ರೂ.ಗಳಷ್ಟು ಆದಾಯ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶತ್ರುಗಳಿಗೆ ಸೇರಿದ ಆಸ್ತಿ ಉತ್ತರ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಕಂಡು ಬಂದಿದ್ದು, ಮಿಕ್ಕಂತೆ ಪಶ್ಚಿಮ ಬಂಗಾಳ, ದೆಹಲಿ, ಗೋವಾ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್, ತ್ರಿಪುರಾ, ಬಿಹಾರ, ಮಧ್ಯ ಪ್ರದೇಶ, ಛತ್ತೀಸ್‌ಘಡ ಹಾಗೂ ಹರಿಯಾಣಗಳಲ್ಲೂ ಸಹ ಶತ್ರುಗಳಿಗೆ ಸೇರಿದ ಸ್ವತ್ತುಗಳು ಕಂಡು ಬಂದಿವೆ.
ಈ ಸಂಬಂಧ ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರದ ಮಟ್ಟದ ಸರ್ವೇಗೆ ಮುಂದಾಗಿದೆ. ಸೆಪಿ ಗುರುತಿಸುವ ಶತ್ರುಗಳ ಆಸ್ತಿಗಳ ಮೌಲ್ಯವನ್ನು ರಕ್ಷಣಾ ಭೂಮಿಯ ಮಹಾ ನಿರ್ದೇಶನಾಲಯ (ಡಿಜಿಡಿಇ) ನಿರ್ಧರಿಸಲಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಚಿವರ ಗುಂಪೊಂದನ್ನು ಈ ನಿಟ್ಟಿನಲ್ಲಿ ರಚಿಸಲಾಗಿದ್ದು, ಶತ್ರುಗಳ ಆಸ್ತಿಗಳ ಮೌಲ್ಯೀಕರಣದ ಉಸ್ತುವಾರಿ ಹೊಣೆಗಾರಿಕೆ ನೀಡಲಾಗಿದೆ. ಶತ್ರುಗಳಿಗೆ ಸೇರಿದ 12,611 ಸ್ವತ್ತುಗಳ ಪೈಕಿ 12,485 ಸ್ವತ್ತುಗಳು ಪಾಕಿಸ್ತಾನದಲ್ಲಿರುವವರಿಗೆ ಸೇರಿದರೆ, 126 ಸ್ವತ್ತುಗಳು ಚೀನಾದಲ್ಲಿರುವವರಿಗೆ ಸೇರಿರುತ್ತದೆ.
ಶತ್ರುವಿಗೆ ಸೇರಿದ, ಅಥವಾ ಆತನ ಪರವಾಗಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ನಿರ್ವಹಿಸಲ್ಪಟ್ಟ, ನಿಯಂತ್ರಿಸಲ್ಪಟ್ಟ ಆಸ್ತಿಯನ್ನು ಶತ್ರುವಿನ ಆಸ್ತಿ ಎಂದು ಪರಿಗಣಿಸಲಾಗುತ್ತದೆ. 1965ರ ಭಾರತ-ಪಾಕಿಸ್ತಾನ ಯುದ್ಧದ ಬಳಿಕ 1968ರಲ್ಲಿ ಶತ್ರುವಿನ ಆಸ್ತಿ ಕಾಯಿದೆಯನ್ನು ಮೊದಲ ಬಾರಿಗೆ ತರಲಾಗಿದೆ. ಈ ಕಾಯಿದೆಯಡಿ ಸೆಪಿ ಶತ್ರುವಿನ ಸ್ವತ್ತುಗಳನ್ನು ವಶಕ್ಕೆ ಪಡೆದು ಅವುಗಳನ್ನು ತೆರವುಗೊಳಿಸುವ ಅಥವಾ ಭಾರತೀಯ ಪ್ರಜೆಗಳಿಗೆ ಮಾರಾಟ ಮಾಡಿ ಭಾರತ ಸರ್ಕಾರಕ್ಕೆ ಕಂದಾಯ ತಂದುಕೊಡುವ ಅಧಿಕಾರ ಹೊಂದಿದೆ.