
ನವದೆಹಲಿ: 8ನೇ ಕೇಂದ್ರ ವೇತನ ಆಯೋಗ ರಚನೆ ಪ್ರಸ್ತಾವನೆ ಪರಿಶೀಲನೆಯಲ್ಲಿಲ್ಲ ಎಂದು ರಾಜ್ಯಸಭೆಯಲ್ಲಿ ಸರ್ಕಾರ ತಿಳಿಸಿದೆ.
ಸಂಸತ್ತಿನಲ್ಲಿ 8ನೇ ವೇತನ ಆಯೋಗವನ್ನು ಸ್ಥಾಪಿಸದಿರುವ ಬಗ್ಗೆ ಹಣಕಾಸು ಸಚಿವಾಲಯ ತನ್ನ ನಿಲುವನ್ನು ಪುನರುಚ್ಚರಿಸಿದ್ದರಿಂದ ಕೇಂದ್ರ ಸರ್ಕಾರಿ ನೌಕರರು ನಿರಾಶೆಗೊಂಡಿದ್ದಾರೆ. ರಾಜ್ಯಸಭಾ ಸಂಸದ ರಾಮ್ ನಾಥ್ ಠಾಕೂರ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿತ್ತ ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಅಂತಹ ಯಾವುದೇ ಪ್ರಸ್ತಾವನೆಯು ಪರಿಗಣನೆಯಲ್ಲಿಲ್ಲ ಮತ್ತು 7 ನೇ ವೇತನ ಆಯೋಗದ ಶಿಫಾರಸುಗಳ ಪ್ಯಾರಾ 1.22 ಅನ್ನು ಜಾರಿಗೊಳಿಸುವ ವಿಷಯವನ್ನು ಕೇಂದ್ರವು ಚರ್ಚಿಸಿಲ್ಲ ಎಂದು ಹೇಳಿದ್ದಾರೆ.
ಸರ್ಕಾರವು ವೇತನ ಆಯೋಗದ ಹೊರೆಯನ್ನು ಹೊರುವ ಸ್ಥಿತಿಯಲ್ಲಿಲ್ಲದ ಕಾರಣ ಎಂಟನೇ ಕೇಂದ್ರೀಯ ವೇತನ ಆಯೋಗವನ್ನು ಸ್ಥಾಪಿಸುವ ಯಾವುದೇ ಪ್ರಸ್ತಾವನೆ ಪರಿಶೀಲನೆಯಲ್ಲಿಲ್ಲವೇ ಎಂಬ ಪ್ರಶ್ನೆಗೆ ಸಚಿವರು ಕಾರಣವನ್ನು ವಿವರಿಸದೆ ಉತ್ತರಿಸಿದ್ದು, ಅಂತಹ ಯಾವುದೇ ಪ್ರಸ್ತಾವನೆಯು ಸರ್ಕಾರದ ಪರಿಗಣನೆಯಲ್ಲಿಲ್ಲ ಎಂದು ತಿಳಿಸಿದ್ದಾರೆ.
ಹೆಚ್ಚಿನ ಹಣದುಬ್ಬರ ದರಗಳನ್ನು ಪರಿಗಣಿಸಿ ವೇತನ ಪರಿಷ್ಕರಣೆಗಾಗಿ ನೌಕರರ ಸಂಘಗಳಿಂದ ಹೆಚ್ಚುತ್ತಿರುವ ಬೇಡಿಕೆಗಳ ನಡುವೆ ಈ ಹೇಳಿಕೆ ಬಂದಿದೆ. 7ನೇ ವೇತನ ಆಯೋಗದ ವರದಿಯ ಪ್ಯಾರಾ 1.22 ಐದು ವರ್ಷಗಳ ನಂತರ ಫಿಟ್‌ಮೆಂಟ್ ಅಂಶವನ್ನು ಪರಿಶೀಲಿಸಲು ಶಿಫಾರಸು ಮಾಡಿದೆ. ಇದು ಸಂಬಳವನ್ನು ಹೆಚ್ಚಿಸಲು ಕಾರಣವಾಗಬಹುದು. ಆದರೆ, ಸರ್ಕಾರ ಈ ಸಲಹೆಯನ್ನು ಅನುಷ್ಠಾನಕ್ಕೆ ತರದೆ ನಿರ್ಲಕ್ಷ್ಯ ವಹಿಸಿದೆ ಎಂದು ಹೇಳಲಾಗಿದೆ.
ಹೆಚ್ಚುತ್ತಿರುವ ಜೀವನ ವೆಚ್ಚವನ್ನು ಎದುರಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರು ಕೇಂದ್ರದ ಪ್ರತಿಕ್ರಿಯೆಗೆ ಅಸಮಾಧಾನ ಸರ್ಕಾರ ತಮ್ಮ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಪ್ರತಿಭಟನೆ ನಡೆಸುವುದಾಗಿ ಒಕ್ಕೂಟದ ಮುಖಂಡರು ಹೇಳಿದ್ದಾರೆ.