
ಕೇಂದ್ರ ಸರ್ಕಾರದ ಈ ಘೋಷಣೆಯ ಬಳಿಕ ಒಬಿಸಿ ವಿದ್ಯಾರ್ಥಿಗಳಿಗೆ 27 ಪ್ರತಿಶತ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 10 ಪ್ರತಿಶತ ಮೀಸಲಾತಿ ಸಿಗಲಿದೆ. ಬಿಡಿಎಸ್, ಎಂಡಿಎಸ್, ಎಂಬಿಬಿಎಸ್, ಎಂಡಿ, ವೈದ್ಯಕೀಯ ಹಾಗೂ ದಂತವೈದ್ಯಕೀಯ ಸೇರಿದಂತೆ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಪದವಿ ಹಾಗೂ ಸ್ನಾತಕೋತ್ತರ ವಿಭಾಗದ ಪದವಿ ಕೋರ್ಸ್ಗಳ 2021-22ನೇ ಸಾಲಿನ ಪ್ರವೇಶಾತಿಯಲ್ಲಿ ಈ ಮೀಸಲಾತಿ ಸಿಗಲಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಪ್ರತಿವರ್ಷ ಎಂಬಿಬಿಎಸ್ ಮಾಡುವ ಸರಿ ಸುಮಾರು 1500 ಒಬಿಸಿ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿ ಪೂರೈಸಬಯಸುವ 2500 ವಿದ್ಯಾರ್ಥಿಗಳಿಗೆ ನೆರವಾಗಲಿದೆ. ಅದೇ ರೀತಿ ಎಂಬಿಬಿಎಸ್ ವಿಭಾಗದ 550 ಹಾಗೂ ಸ್ನಾತಕೋತ್ತರ ವಿಭಾಗದ 1000 ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ.
ಪ್ರಧಾನಿ ಮೋದಿ ಸೂಚನೆಯಂತೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯು ಈ ಮಹತ್ವದ ಆದೇಶವನ್ನು ನೀಡಿದೆ. 1986ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅಖಿಲ ಭಾರತೀಯ ಕೋಟಾವನ್ನ ಜಾರಿಗೆ ತರಲಾಗಿತ್ತು. ಈ ಯೋಜನೆಯ ಮೂಲಕ ವಿದ್ಯಾರ್ಥಿಯು ಬೇರೆ ರಾಜ್ಯದಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ಅರ್ಹತೆ ಪಡೆಯಬಹುದಾಗಿದೆ.