ಬಾಲಿವುಡ್ ಚಿತ್ರರಂಗದ ಹಿರಿಯ ನಟ ಗೋವಿಂದ ಅವರಿಗೆ ಸಂಕಷ್ಟ ಎದುರಾಗಿದೆ. ಕ್ರಿಪ್ಟೋ ಹೂಡಿಕೆಯ ಸೋಗಿನಲ್ಲಿ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯೊಂದರ ಪ್ರಚಾರ ವಿಡಿಯೋಗಳಲ್ಲಿ ಗೋವಿಂದ ಕಾಣಿಸಿಕೊಂಡಿದ್ದು, ಅವರ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ.
ಹಲವಾರು ದೇಶಗಳಲ್ಲಿ ಆನ್ಲೈನ್ ಮೂಲಕ ಸಕ್ರಿಯವಾಗಿರುವ ಸೋಲಾರ್ ಟೆಕ್ನೋ ಅಲಯನ್ಸ್ 1,000 ಕೋಟಿ ರೂಪಾಯಿಗಳ ಆನ್ಲೈನ್ ಹಗರಣ ನಡೆಸಿದೆ ಎನ್ನಲಾಗಿದ್ದು, ಇದರ ಪ್ರಚಾರ ವಿಡಿಯೋಗಳಲ್ಲಿ ಗೋವಿಂದ ಕಾಣಿಸಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಒಡಿಶಾ ಆರ್ಥಿಕ ಅಪರಾಧಗಳ ವಿಭಾಗ, ಗೋವಿಂದ ಅವರ ವಿಚಾರಣೆ ನಡೆಸಲಿದೆ ಎನ್ನಲಾಗಿದ್ದು, ಇನ್ಸ್ಪೆಕ್ಟರ್ ಜನರಲ್ ಜೆ.ಎನ್. ಪಂಕಜ್ ಈ ವಿಷಯ ತಿಳಿಸಿದ್ದಾರೆ. ಒಡಿಶಾದ ವಿವಿಧ ಜಿಲ್ಲೆಗಳ 10,000 ಮಂದಿಯಿಂದ ಈ ಕಂಪನಿ 30 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ ವಂಚಿಸಿದೆ ಎಂದು ದೂರು ಸಲ್ಲಿಸಲಾಗಿದೆ.