ಧಾರವಾಡ: ಲೋಕೋಪಯೋಗಿ ಇಲಾಖೆಯಲ್ಲಿ ಕಿರಿಯ ಇಂಜಿನೀಯರ್ ಗಳು ಹಾಗೂ ಸಹಾಯಕ ಇಂಜಿನಿಯರ್‍ಗಳ ಸುಮಾರು 990 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ತಾತ್ಕಾಲಿಕವಾಗಿ ಡಿಪ್ಲೋಮಾ ಮತ್ತು ಬಿಇ ಪದವಿ ಪಡೆದಿರುವ ಅರ್ಹ ಯುವಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ.
ನಗರದ ಸರ್ಕಿಟ್ ಹೌಸ್‍ನಲ್ಲಿ ಇಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನೀಯರ್ ಗಳ ಕೊರತೆಯನ್ನು ತುರ್ತಾಗಿ ಸರಿದೂಗಿಸಲು ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ಡಿಪ್ಲೋಮಾ ಮತ್ತು ಪದವೀಧರ ಇಂಜಿನೀಯರ್ ಗಳನ್ನು ನೇಮಿಸಿಕೊಳ್ಳಲು ಇಂದು ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚಿಸಲಾಗಿದೆ. ಸರ್ಕಾರದ ಅಧಿಕೃತ ಮಾನವ ಸಂಪನ್ಮೂಲ ಏಜೆನ್ಸಿಗಳಿಗೆ ಆಧ್ಯತೆ ನೀಡಲಾಗುವುದು. ಈ ಕ್ರಮದಿಂದ ಸ್ಥಳೀಯ ಯುವಕರು ಹಾಗೂ ಅರ್ಹ ಪದವಿಧರ ಇಂಜಿನೀಯರ್ ಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಇಲಾಖೆಯ ಕಾರ್ಯಚಟುವಟಿಕೆಗಳಿಗೆ ಸಹಾಯವಾಗಲಿದೆ ಎಂದು ತಿಳಿಸಿದ್ದಾರೆ.
ವಿಜಯಪುರದ ವಿಮಾನ ನಿಲ್ದಾಣಕ್ಕೆ ಭೂಮಿ ಪೂಜೆ: ವಿಜಯಪುರ ನಗರದ ಹೊರ ವಲಯದಲ್ಲಿ ಸುಮಾರು 220 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವಿಮಾನನಿಲ್ದಾಣ ಕಾಮಗಾರಿಗೆ ಗ್ರಾ.ಪಂ. ಚುನಾವಣೆ ನೀತಿ ಸಂಹಿತೆ ಮುಕ್ತಾಯವಾದ ಕೂಡಲೇ ಭೂಮಿಪೂಜೆ ನೆರವೇರಿಸಲಾಗುವುದು. ಈ ವಿಮಾನ ನಿಲ್ದಾಣ ಅಭಿವೃದ್ಧಿಯಿಂದ ಉತ್ತರ ಕರ್ನಾಟಕದ ಹುಬ್ಬಳ್ಳಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಹಾಗೂ ವಿಜಯಪುರ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಉಪಮುಖ್ಯಮಂತ್ರಿಗಳು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಲೋಕೋಪಯೋಗಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಬಿ.ಗುರುಪ್ರಸಾದ, ಉತ್ತರ ವಲಯದ ಮುಖ್ಯ ಇಂಜಿನೀಯರ್ ಶಂಕರಗೌಡ ಪಾಟೀಲ, ಧಾರವಾಡ ವಿಭಾಗದ ಅಧೀಕ್ಷಕ ಇಂಜಿನೀಯರ್ ಶಿವಾನಂದ ನಾಯಕ್, ಕಾರ್ಯನಿರ್ವಾಹಕ ಇಂಜಿನೀಯರ್ ಎಸ್.ಬಿ. ಚೌಡಣ್ಣವರ ಮತ್ತಿತರರು ಉಪಸ್ಥಿತರಿದ್ದರು.