ಚಿತ್ರದುರ್ಗ: ನಟ ದರ್ಶನ್ ಹಾಗೂ ಗ್ಯಾಂಗ್ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಹತ್ಯೆ ಮಾಡುವವರೆಗೆ ಸರ್ಕಾರ ಏನು ಮಾಡುತ್ತಿತ್ತು? ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಪ್ರಶ್ನಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಸಂಸದ ಕಾರಜೋಳ, ರಾಜ್ಯ ಸರ್ಕಾರ ಜೀವಂತವಾಗಿದೆಯೋ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ. ದರ್ಶನ್ ಹಾಗೂ ಗ್ಯಾಂಗ್ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಪಹರಿಸಿ, ಕೊಲ್ಲುವವರೆಗೆ ಸರ್ಕಾರ ಏನು ಮಾಡುತ್ತಿತ್ತು? ಚಿತ್ರದುರ್ಗದ ಇಂಟಲಿಜನ್ಸ್ ಇಲಾಖೆ ಏನು ಮಾಡುತ್ತಿತ್ತು? ಪೊಲೀಸರು ನಿಷ್ಕ್ರಿಯ ಗೊಂಡಿರುವುದು ಯಾಕೆ? ಎಂದು ಕೇಳಿದ್ದಾರೆ.
ಈ ಸಂದರ್ಭಗಳನ್ನು ನೋಡುತ್ತಿದ್ದರೆ ಸರ್ಕಾರ ಜಿವಂತವಾಗಿದೆ ಎನ್ನಿಸುತ್ತಿಲ್ಲ. ಸ್ಥಳೀಯ ಶಾಸಕ ಮೃತರ ಕುಟುಂಬಕ್ಕೆ 24 ಗಂಟೆಯೊಳಗೆ ಸಾಂತ್ವನ ಹೇಳಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಈವರೆಗೆ ತಿರುಗಿಯೂ ನೋಡಿಲ್ಲ. ಶಾಸಕರು ಹಾಗೂ ಸಚಿವರ ನಡೆಯನ್ನು ಖಂಡಿಸುತ್ತೇನೆ ಎಂದು ಕಿಡಿಕಾರಿದರು.