ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಗೆ ಐದು ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ, ಗಗನ್ ಕಡೂರು, ಅಭಿನವ ಹಾಲಾಶ್ರೀ ಸೇರಿದಂತೆ ಹಲವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳಿಂದ ನಗದು ಸೇರಿದಂತೆ ಎರಡು ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ಆಸ್ತಿ ಜಪ್ತಿ ಮಾಡಿಕೊಂಡಿದ್ದು, ಇದರ ಮಧ್ಯೆ ದೂರು ದಾಖಲಾದ ಬಳಿಕ ಆರೋಪಿಗಳ ಪೈಕಿ ಒಬ್ಬನಾದ ಅಭಿನವ ಹಾಲಾಶ್ರೀ, ಗೋವಿಂದ ಬಾಬು ಪೂಜಾರಿಯವರಿಗೆ 50 ಲಕ್ಷ ರೂಪಾಯಿ ಮರಳಿಸಿದ್ದ ಎಂಬ ಸಂಗತಿಯೂ ಬೆಳಕಿಗೆ ಬಂದಿದೆ.
ಇದೀಗ ಚೈತ್ರಾ ಕುಂದಾಪುರ ಮತ್ತು ತಂಡದ ವಿರುದ್ಧ ದೂರು ನೀಡಿರುವ ಗೋವಿಂದ ಬಾಬು ಪೂಜಾರಿಯವರಿಗೂ ಸಂಕಷ್ಟ ಎದುರಾಗಿದ್ದು, ಇವರು ನೀಡಿರುವ 5 ಕೋಟಿ ರೂಪಾಯಿ ಹಣದ ಮೂಲದ ಕುರಿತು ತನಿಖೆ ನಡೆಸುವಂತೆ ವಕೀಲ ನಟರಾಜ ಶರ್ಮಾ ಎಂಬವರು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ.
ಗೋವಿಂದ ಬಾಬು ಪೂಜಾರಿಯವರು ಆರೋಪಿಗಳಿಗೆ ಒಂದೇ ದಿನ ಕೋಟ್ಯಾಂತರ ರೂಪಾಯಿ ನೀಡಿರುವುದಾಗಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಹೀಗಾಗಿ ಈ ವಹಿವಾಟಿನಲ್ಲಿ ‘ಹವಾಲ’ ನಡೆದಿರುವ ಸಾಧ್ಯತೆಯಿದ್ದು, ಹೀಗಾಗಿ ಸಮಗ್ರ ತನಿಖೆ ನಡೆಸುವಂತೆ ನಟರಾಜ ಶರ್ಮಾ ಜಾರಿ ನಿರ್ದೇಶನಲಯಕ್ಕೆ ಸಲ್ಲಿಸಿರುವ ತಮ್ಮ ದೂರಿನಲ್ಲಿ ಮನವಿ ಮಾಡಿದ್ದಾರೆ.