ಬೆಂಗಳೂರು: ಕುಲಪತಿಗಳ ನೇಮಕಾತಿ ಸೇರಿದಂತೆ ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ರಾಜ್ಯ ಸರ್ಕಾರಕ್ಕೆ ಪರಮಾಧಿಕಾರ ನೀಡುವ ಗುಜರಾತ್ ಮಾದರಿ ಕಾಯ್ದೆ ಜಾರಿಗೆ ತರಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿವಿಗಳ ಮೇಲೆ ರಾಜ್ಯಪಾಲರು ಹೊಂದಿರುವ ಅಧಿಕಾರ ಮೊಟಕುಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ 2000ಕ್ಕೆ ತಿದ್ದುಪಡಿ ತರಲಾಗುವುದು ಎಂದು ಹೇಳಿದ್ದಾರೆ.
ಸಿದ್ಧವಾಗಿರುವ ಕರಡು ಮಸೂದೆಯನ್ನು ಕಾನೂನು ಇಲಾಖೆ ಅಭಿಪ್ರಾಯಕ್ಕೆ ಕಳುಹಿಸಲಾಗುವುದು. ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಸೇರಿದಂತೆ ಕಾಯ್ದೆ ವ್ಯಾಪ್ತಿಗೆ ಒಳಪಡುವ ಎಲ್ಲಾ ವಿವಿಗಳಿಗೂ ತಿದ್ದುಪಡಿ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.
ಜಿ. ಪರಮೇಶ್ವರ್ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಕಾಯ್ದೆಗೆ ತಿದ್ದುಪಡಿ ತರಲು ಪ್ರಯತ್ನಿಸಿದ್ದರು. ಆದರೆ ಅಂದಿನ ರಾಷ್ಟ್ರಪತಿ ಮಸೂದೆಗೆ ಒಪ್ಪಿಗೆ ನೀಡಿರಲಿಲ್ಲ. ಗುಜರಾತ್ ಸರ್ಕಾರ ಹೊಸ ಕಾಯ್ದೆ ಜಾರಿಗೆ ತಂದಿದ್ದು, ಅಲ್ಲಿನ ಕಾಯ್ದೆಯ ಪ್ರಕಾರ ಕುಲಪತಿ, ಪ್ರಭಾರ ಕುಲಪತಿ ನೇಮಕಾತಿಯಲ್ಲಿ ರಾಜ್ಯಪಾಲರಿಗಿಂತ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಅಧಿಕಾರವಿದೆ. ಕುಲ ಸಚಿವರು, ಮೌಲ್ಯಮಾಪನ ಕುಲ ಸಚಿವರು, ಹಣಕಾಸು ಅಧಿಕಾರಿ, ಸಿಂಡಿಕೇಟ್ ಸದಸ್ಯರ ನೇಮಕಾತಿಯನ್ನು ರಾಜ್ಯ ಸರ್ಕಾರವೇ ಮಾಡುತ್ತದೆ ಎಂದು ಹೇಳಿದ್ದಾರೆ.