ಬೆಂಗಳೂರು: ವಿಧಾನ ಮಂಡಲದ ಉಭಯ ಸದನಗಳ ಅನುಮೋದನೆ ಪಡೆದುಕೊಂಡಿದ್ದ 11 ಪ್ರಮುಖ ವಿಧೇಯಕಗಳಿಗೆ ಅನುಮೋದನೆ ನೀಡದೆ ಸರ್ಕಾರಕ್ಕೆ ಮರಳಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರು ಇದೀಗ ಮೂರು ವಿಧೇಯಕಗಳಿಗೆ ಅನುಮೋದನೆ ನೀಡಿದ್ದಾರೆ. ಇನ್ನು ಎಂಟು ಮಸೂದೆಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ.
ಕರ್ನಾಟಕ ಸಾರ್ವಜನಿಕ ಪರೀಕ್ಷೆಗಳು(ನೇಮಕದಲ್ಲಿ ಭ್ರಷ್ಟಾಚಾರ ಮತ್ತಿತರ ಅಕ್ರಮ ತಡೆ) ವಿಧೇಯಕ -2023, ಕರ್ನಾಟಕ ಪೌರ ಸಂಸ್ಥೆಗಳು ಮತ್ತು ಇತರೆ ಕೆಲವು ಕಾನೂನು(ತಿದ್ದುಪಡಿ) ವಿಧೇಯಕ -2024, ರೇಣುಕಾ ಎಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ -20024ಕ್ಕೆ ಸಹಿ ಹಾಕಿರುವ ರಾಜ್ಯಪಾಲರು ಸಂಬಂಧಿಸಿದ ಕಡತಗಳನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ. ಈ ಮೂಲಕ ಕಾಯ್ದೆಯ ರೂಪದಲ್ಲಿ ಇವು ಜಾರಿಯಾಗಲಿವೆ.
ವಿಧಾನ ಮಂಡಲದಲ್ಲಿ ಅನುಮೋದನೆ ಪಡೆದ ವಿಧೇಯಕಗಳಿಗೆ ಅನುಮೋದನೆ ನೀಡದೆ ರಾಜ್ಯಪಾಲರು ವಾಪಸ್ ಕಳಿಸಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಬಳಿಕ ಸರ್ಕಾರ 11 ವಿಧೇಯಕಗಳನ್ನು ಮತ್ತೆ ರಾಜ್ಯಪಾಲರಿಗೆ ಕಳುಹಿಸಿ ಕೆಲವು ಸ್ಪಷ್ಟನೆಗಳೊಂದಿಗೆ ಅನುಮೋದನೆಗೆ ಮನವಿ ಮಾಡಿತ್ತು. 11 ವಿಧೇಯಕಗಳಲ್ಲಿ ಮೂರು ಮಸೂದೆಗೆ ಅಂಕಿತ ದೊರೆತಿದೆ.