ಬೆಂಗಳೂರು: ಸಬ್ ರಿಜಿಸ್ಟ್ರಾರ್ ಕಚೇರಿಗೆ ಖುದ್ದಾಗಿ ಹಾಜರಾಗದೆ ಆಸ್ತಿ ನೋಂದಣಿಗೆ ಅವಕಾಶ ಮಾಡಿಕೊಡುವ ನೋಂದಣಿ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಸ್ಪಷ್ಟನೆ ಕೇಳಿದ್ದಾರೆ.
ವಿಧಾನ ಮಂಡಲದ ಅನುಮೋದನೆ ಪಡೆದುಕೊಂಡ ಮಸೂದೆಯನ್ನು ಫೆಬ್ರವರಿಯಲ್ಲಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ರಾಜ್ಯಪಾಲರು ಇತ್ತೀಚೆಗೆ ಮಸೂದೆಯ ಕುರಿತಾಗಿ ಸ್ಪಷ್ಟನೆ ಕೇಳಿದ್ದಾರೆ. ಈ ಮಸೂದೆ ಜಾರಿಯಾದಲ್ಲಿ ಉಪ ನೋಂದಣಾಧಿಕಾರಿ ಕಚೇರಿಗೆ ವ್ಯಕ್ತಿ ಹಾಜರಾಗದೆ ಆಸ್ತಿ ನೋಂದಣಿ ಮಾಡಿಸಬಹುದು. ಸಹಿ ಮಾಡಿದ ಮೂಲ ದಾಖಲೆ ನೀಡುವ ಪದ್ಧತಿ ಹೋಗಿ ಡಿಜಿಟಲ್ ಸಹಿ ಇರುವ ದಾಖಲೆ ನೀಡಲಾಗುವುದು. ಇದರಿಂದ ಹಣಕಾಸು ವಂಚನೆ, ನೋಂದಣಿ ಪ್ರಕ್ರಿಯೆ ವೇಳೆಯೂ ವಂಚನೆಗೆ ಕಾರಣವಾಗಬಹುದು ಎಂದು ರಾಜ್ಯಪಾಲರು ಸ್ಪಷ್ಟನೆ ಬಯಸಿದ್ದಾರೆ.
ಈ ನೂತನ ವ್ಯವಸ್ಥೆ ಸುರಕ್ಷಿತವಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ. ಕೇಂದ್ರ ಸರ್ಕಾರವೇ ಡಿಜಿಟಲ್ ಭೂ ದಾಖಲೆಗಳ ಆಧುನಿಕರಣ ಕಾರ್ಯಕ್ರಮದ ಅಡಿಯಲ್ಲಿ ಇಂತಹ ಸುಧಾರಣೆಗಳ ಬಗ್ಗೆ ಸೂಚನೆ ನೀಡಿದ್ದು, ಅದನ್ನು ನಾವು ಅನುಷ್ಠಾನಕ್ಕೆ ತರುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿ ಹಣಕಾಸು ವ್ಯವಹಾರ ವ್ಯವಹಾರಗಳು ಡಿಜಿಟಲ್ ಸಹಿ ಮೂಲಕ ನಡೆಯುತ್ತಿದೆ. ಈ ಪದ್ಧತಿ ಜಾರಿಯಾದರೂ ಖುದ್ದಾಗಿ ನೋಂದಣಾಧಿಕಾರಿ ಕಚೇರಿಗೆ ಹಾಜರಾಗಿ ನೋಂದಣಿ ಮಾಡಿಸುವ ಹಳೆ ಪದ್ಧತಿಯು ಜಾರಿಯಲ್ಲಿರುತ್ತದೆ. ರಾಜ್ಯಪಾಲರು ಕೇಳಿದ ಸ್ಪಷ್ಟನೆಯ ಬಗ್ಗೆ ಕರಡು ಸಿದ್ಧವಾಗಿದ್ದು, ಮತ್ತೊಮ್ಮೆ ಪರಿಶೀಲನೆ ನಡೆಸಿ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.