ಬಳ್ಳಾರಿ : ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಹಾಗೂ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ, ಕರ್ನಾಟಕ ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿ ಮಂಡಳಿಗೆ ರೈತರು ನೀಡಿರುವ ಭೂಮಿಯನ್ನು ಅಭಿವೃದ್ಧಿ ಪಡಿಸಿ, ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಯುವಜನ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.
ಭಾನುವಾರದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಅವರು ಮಾತನಾಡಿದರು.
ಭೂ ಮಾಲೀಕರು ಈ ಹಿಂದೆ ಒಳ್ಳೆಯ ಉದ್ದೇಶಕ್ಕಾಗಿ ಭೂಮಿ ನೀಡಿದ್ದೀರಿ, ಆದರೆ ತಮಗೆ ನೀಡಿದ ಭರವಸೆಯಂತೆ ಯಾರೊಬ್ಬರೂ ಕೈಗಾರಿಕೆ ಸ್ಥಾಪನೆಗೆ ಸಂಬಂಧಿಸಿದಂತೆ ಮುಂದೆ ಬಂದಿಲ್ಲ. ಈ ವಿಚಾರವಾಗಿ ಮಾನ್ಯ ಮುಖ್ಯಮಂತ್ರಿ ಹಾಗೂ ಕೈಗಾರಿಕಾ ಸಚಿವರೊಂದಿಗೆ ಚರ್ಚಿಸಿ ತಮ್ಮ ಸಮಸ್ಯೆ ನಿವಾರಣೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಸಭೆ ನಡೆಸಲಾಗುವುದು ಎಂದರು.
ಕೈಗಾರಿಕೆ ಸ್ಥಾಪನೆಗೆ ಸಂಬಂಧಿಸಿದಂತೆ, ನೀಡಿರುವ ಭೂಮಿಯ ಭೂ ಮಾಲೀಕರು, ಮರಳಿ ಭೂಮಿ ನೀಡುವಂತೆ ಹೋರಾಟ ನಡೆಸುತ್ತೀದ್ದಿರಿ, ಆದರೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಬದಲಾಗಿ ಇತ್ಯರ್ಥಮಾಡಿಕೊಳ್ಳುವ ಮೂಲಕ, ಕೈಗಾರಿಕೆ ಸ್ಥಾಪನೆ ಅಭಿವೃದ್ಧಿಗೆ ಸಹಕರಿಸಬೇಕು. ಇದರಿಂದ ಮುಂದಿನ ತಮ್ಮ ಮಕ್ಕಳಿಗೂ ಉದ್ಯೋಗಾವಕಾಶ ಲಭಿಸಲಿದೆ ಎಂದು ಹೇಳಿದರು.
ಈ ಭಾಗದಲ್ಲಿ ಕೈಗಾರಿಕೆಗಳು ಬಹಳ ಇದ್ದು, ಉತ್ತಮ ವಾತಾವರಣದ ದೃಷ್ಟಿಯಿಂದ ಉನ್ನತ ಕೈಗಾರಿಕೆಗಳಿಗೆ ಅನುಮತಿ ನೀಡಬೇಕು ಎಂದು ಭೂ ಮಾಲೀಕರೊಬ್ಬರು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಮೊದಲು ಕೈಗಾರಿಕೆ ಸ್ಥಾಪನೆಗೆ ಸಂಬಂಧಿಸಿದಂತೆ ಅರ್ಜಿ ಆಹ್ವಾನಿಸಲಾಗುವುದು. ನಂತರ ಯಾವ ವಿಧದ ಕೈಗಾರಿಕೆಗಳು ಸ್ಥಾಪನೆಗೆ ಮುಂದೆ ಬರಲಿವೆ ಎಂಬುದು ತಿಳಿಯುತ್ತದೆ. ಈ ಆಧಾರದಲ್ಲಿ ನಮ್ಮ ಮಕ್ಕಳ ಶಿಕ್ಷಣಕ್ಕನುಗುಣವಾಗಿ ಉತ್ತಮವಾದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದು ವಿವರಿಸಿದರು.
ಭೂಮಿ ಕಳೆದುಕೊಂಡವರಿಗೆ ಪರಿಹಾರವಾಗಿ ಉದ್ಯೋಗ ಕಲ್ಪಿಸಲಾಗುವುದು ಹಾಗೂ ಮೊದಲ ಆದ್ಯತೆ ಸ್ಥಳೀಯರಿಗೆ ನೀಡಲಾಗುವುದು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ರೈತರ ಪರವಾಗಿಯೇ ಇರುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ “ಟೆಕ್ಮೀಟ್” ಆಯೋಜಿಸಬೇಕು. ಬೃಹತ್ ಕೈಗಾರಿಕೆಗಳು ಭಾಗವಹಿಸುತ್ತವೆ. ಇದರಿಂದ ಕೈಗಾರಿಕೆ ಸ್ಥಾಪನೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಕೆಐಎಡಿಬಿ ಅಧಿಕಾರಿಯೊಬ್ಬರು ತಮ್ಮ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಸೇರಿದಂತೆ ಕೆಐಎಡಿಬಿ ಅಧಿಕಾರಿ ವರ್ಗ ಮತ್ತು ರೈತರು ಭೂ ಮಾಲೀಕರು ಉಪಸ್ಥಿತರಿದ್ದರು.