ಬೆಂಗಳೂರು: ವಸತಿ, ವಾಣಿಜ್ಯ ಕಟ್ಟಡಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣ ಘಟಕ ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿದೆ.
ನಗರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತೀವ್ರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಸತಿ ಸಮುಚ್ಚಯ, ವಾಣಿಜ್ಯ ಕಟ್ಟಡಗಳು, ಹಾಸ್ಟೆಲ್ ಗಳು, ಶಿಕ್ಷಣ ಸಂಸ್ಥೆಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಘಟಕ ಸ್ಥಾಪಿಸುವಂತೆ ಸರ್ಕಾರ ಆದೇಶ ಮಾಡಿದೆ.
ತ್ಯಾಜ್ಯ ನೀರು ಸಂಸ್ಕರಿಸಿ ಮರುಬಳಕೆಗೆ ಸಂಬಂಧಿಸಿದಂತೆ 2016ರ ಸರ್ಕಾರಿ ಅಧಿಸೂಚನೆಗೆ ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ ಇಲಾಖೆ ಹೊಸ ಅಂಶಗಳನ್ನು ಸೇರಿಸಿ ಈ ಆದೇಶ ಹೊರಡಿಸಿದೆ. ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 120 ಯೂನಿಟ್ ಗಿಂತ ಹೆಚ್ಚಿನ(ಫ್ಲ್ಯಾಟ್, ಮನೆ) ಅಥವಾ ಪ್ರತಿದಿನ 80 ಕಿಲೋ ಲೀಟರ್ ಗಿಂತ ಹೆಚ್ಚಿನ ತ್ಯಾಜ್ಯ ನೀಡುವ ಉತ್ಪಾದಿಸುವ ವಸತಿ ಸಮುಚ್ಚಯಗಳು, 5000 ಚ. ಮೀ. ವಿಸ್ತೀರ್ಣದ ಅಥವಾ 35 ಕಿಲೋ ಲೀಟರ್ ಗಿಂತ ಹೆಚ್ಚಿನ ತ್ಯಾಜ್ಯ ನೀರು ಉತ್ಪಾದಿಸುವ ಹೊಸ ಕಟ್ಟಡಗಳು ಹಾಗೂ ಶಿಕ್ಷಣ ಸಂಸ್ಥೆಗಳು ತ್ಯಾಜ್ಯ ನೀರು ಸಂಸ್ಕರಣ ಘಟಕ ಸ್ಥಾಪನೆ ಮಾಡುವಂತೆ ತಿಳಿಸಲಾಗಿದೆ.