ಬೆಂಗಳೂರು: ಅಸ್ಪೃಶ್ಯತೆ ತಡೆಗೆ ‘ವಿನಯ ಸಾಮರಸ್ಯ ಯೋಜನೆ’ ಜಾರಿಗೆ ಸರ್ಕಾರ ಮುಂದಾಗಿದೆ. ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಜನಾಂದೋಲನ ರೂಪಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಇಲಾಖಾವಾರು ಅನುದಾನ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಕೊಪ್ಪಳ ಜಿಲ್ಲೆಯ ಮಿಯಾಪುರದಲ್ಲಿ ಎರಡು ವರ್ಷದ ವಿನಯ್ ಆಕಸ್ಮಿಕವಾಗಿ ದೇಗುಲಕ್ಕೆ ಪ್ರವೇಶಿಸಿದ್ದರಿಂದ ಗ್ರಾಮಸ್ಥರು ಪೋಷಕರಿಗೆ ದಂಡ ವಿಧಿಸಿದ್ದಾರೆ. ಅಸ್ಪೃಶ್ಯತೆಯನ್ನು ನಿವಾರಿಸುವ ಉದ್ದೇಶದಿಂದ ಅನೇಕ ಕ್ರಮ ಕೈಗೊಂಡಿದ್ದರೂ, ಇನ್ನು ಸಮಾಜದಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದೆ. ಇದನ್ನು ನಿವಾರಿಸಲು ವಿನಯ ಸಾಮರಸ್ಯ ಎಂಬ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದರು.
ಅಸ್ಪೃಶ್ಯತೆ ವಿರುದ್ಧ ಸಾಮಾಜಿಕ ಸಾಮರಸ್ಯ ಕಾಪಾಡಲು ಗ್ರಾಮ ಪಂಚಾಯತಿ ಸದಸ್ಯರಲ್ಲಿ ಜಾಗೃತಿ ಮೂಡಿಸಲಾಗುವುದು. ಅಸ್ಪೃಶ್ಯತೆ ಮುಕ್ತವಾದ ಗ್ರಾಮಗಳಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಹೇಳಿದ್ದಾರೆ.