ಬೆಂಗಳೂರು: ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆ ಈಡೇರಿಕೆಗೆ ತಜ್ಞರ ಸಮಿತಿ ರಚಿಸಲಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿನ ಅನ್ಯಾಯ ಸರಿಪಡಿಸುವ ಸಂಬಂಧ ತಜ್ಞರ ಸಮಿತಿಯನ್ನು ಸರ್ಕಾರ ರಚನೆ ಮಾಡಿದ್ದು, ಸೂಕ್ತ ಶಿಫಾರಸು ಹಾಗೂ ಅಭಿಪ್ರಾಯದೊಂದಿಗೆ ಸಮಗ್ರ ವರದಿ ಸಲ್ಲಿಸಲು ಆದೇಶಿಸಿದೆ.
2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016 ಕ್ಕಿಂತ ಮೊದಲು ನೇಮಕವಾದ ಶಿಕ್ಷಕ ವೃಂದಕ್ಕೆ ಪೂರ್ವಾನ್ವಯಗೊಳಿಸಬಾರದು. ಸೇವಾ ನಿರತ ಶಿಕ್ಷಕರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಅಲ್ಲದೇ ಪದವಿ ಪೂರ್ಣಗೊಳಿಸಿದ ಶಿಕ್ಷಕರನ್ನು ಆರರಿಂದ ಎಂಟನೇ ತರಗತಿಗೆ ಸೇವಾ ನಿರತ ಪದವೀಧರ ಶಿಕ್ಷಕರೆಂದು ಒಂದು ಬಾರಿ ಪದನಾಮಗೊಳಿಸುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಹಲವು ಬಾರಿ ಪ್ರತಿಭಟನೆ ನಡೆಸಿ ಸಿಎಂಗೆ ಮನವಿ ಸಲ್ಲಿಸಿದ್ದರು.
ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ಸರ್ಕಾರ ರಚನೆ ಮಾಡಿದೆ. ಸಮಿತಿಯು ಸಂಘದ ಬೇಡಿಕೆಗಳನ್ನು ಪರಿಗಣಿಸುವ ಕುರಿತಂತೆ ಪ್ರಸ್ತುತ ಅಸ್ತಿತ್ವದಲ್ಲಿರುವ ನಿಯಮಗಳನ್ನು ಸಮಗ್ರವಾಗಿ ಪರಿಶೀಲಿಸಲಿದೆ. ನಿಯಮಗಳಲ್ಲಿ ಇರುವ ಅವಕಾಶ, ಇದರಿಂದ ಶೈಕ್ಷಣಿಕ ವ್ಯವಸ್ಥೆ ಮೇಲೆ ಉಂಟಾಗುವ ಪರಿಣಾಮ, ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ ತಿಂಗಳೊಳಗೆ ಸ್ಪಷ್ಟ ಅಭಿಪ್ರಾಯಗಳೊಂದಿಗೆ ಸಮಗ್ರ ವರದಿ ಸಲ್ಲಿಸಲು ರಾಜ್ಯ ಸರ್ಕಾರ ಆದೇಶಿಸಿದೆ.
ಸರ್ಕಾರದ ಈ ಕ್ರಮವನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸ್ವಾಗತಿಸಿದ್ದು, ಕಾಲಮಿತಿಯೊಳಗೆ ಸಮಿತಿಯು ಶಿಕ್ಷಕರ ಬೇಡಿಕೆಗಳಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಕೋರಿದೆ.