
ಬೆಂಗಳೂರು: ಮಾದಕ ಔಷಧಿಗಳ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ 17 ಲಕ್ಷ ರೂ. ಮೌಲ್ಯದ ಕಳಪೆ ಗುಣಮಟ್ಟದ ಔಷಧಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ನಿಯಮ ಉಲ್ಲಂಘನೆ ಕಂಡು ಬಂದ 75 ಸಂಸ್ಥೆಗಳ ವಿರುದ್ಧ ಮೊಕದ್ದಮೆಗೆ ಸೂಚಿಸಲಾಗಿದೆ. 400 ಔಷಧ ಮಳಿಗೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. 213 ಸಂಸ್ಥೆಗಳ ಪರವಾನಗಿ ಅಮಾನತು ಪಡಿಸಿ, 3 ಔಷಧ ಮಳಿಗೆಗಳ ಪರವಾನಗಿ ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಕಳಪೆ ಔಷಧಗಳ ವಿರುದ್ಧ ನಮ್ಮ ಸರ್ಕಾರ ಕಢಿಣ ಕ್ರಮಗಳನ್ನು ಕೈಗೊಂಡಿದೆ. ಗುಣಮಟ್ಟದ ಔಷಧಗಳು ಸಾರ್ವಜನಿಕರಿಗೆ ದೊರೆಯದಂತೆ ತಡೆಯಲು, ದಾಸ್ತಾನುಗಳನ್ನು ಹಿಂಪಡೆಯಲು ಕಾನೂನು ರೂಪಿಸಲಾಗುವುದು. ಈಗಾಗಲೇ ನಮ್ಮ ಅಧಿಕಾರಿಗಳು ಔಷಧಗಳ ನಿಯಮಿತ ತಪಾಸಣೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈವರೆಗೆ 488 ಮಳಿಗೆಗೆಳ ಪರಿಶೀಲನೆ ನಡೆಸಿದ್ದು, ನಿಯಮ ಉಲ್ಲಂಘಿಸಿರುವ 400 ಮಳಿಗೆಗಳಿಗೆ ನೋಟಿಸ್ ನೀಡಲಾಗಿದೆ. 213 ಅಂಗಡಿಗಳ ಪರವಾನಗಿ ಅಮಾನತು ಮಾಡಲಾಗಿದೆ. 17 ಲಕ್ಷ ರೂಪಾಯಿ ಮೌಲ್ಯದ ಔಷಧಗಳನ್ನು ಮಾರುಕಟ್ಟೆಯಿಂದ ವಾಪಸ್ ಕಳುಹಿಸಲಾಗಿದೆ. ಜನರ ಆರೋಗ್ಯ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಯಾವುದೇ ಕಳಪೆ ಔಷಧಗಳು ಸಾರ್ವಜನಿಕರಿಗೆ ತಲುಪದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.