ಶಿವಮೊಗ್ಗ: ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ನ. 23 ರಿಂದ ಮೊಟ್ಟೆಯ ಜೊತೆಗೆ ವಿಶೇಷ ಪೌಷ್ಠಿಕಾಂಶವುಳ್ಳ ಆಹಾರ ನೀಡಲು ತೀರ್ಮಾನಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದ ಸರ್ಕಾರಿ ಶಾಲೆ ಮಕ್ಕಳಿಗಾಗಿ ವಿಶೇಷ ಪೌಷ್ಟಿಕಾಂಶವುಳ್ಳ ಆಹಾರ ನೀಡಲು ತೀರ್ಮಾನಿಸಲಾಗಿದ್ದು, ಇದರೊಂದಿಗೆ ಗುಣಮಟ್ಟದ ಶಿಕ್ಷಣ ನೀಡಲು ಯೋಜನೆ ರೂಪಿಸಲಾಗಿದೆ. ಖಾಸಗಿ ಸಂಸ್ಥೆಗಳಿಂದ ಶಿಕ್ಷಕರಿಗೆ ತರಬೇತಿ ಕೊಡಿಸಲಾಗುವುದು. ಪಠ್ಯಪುಸ್ತಕಗಳ ಗಾತ್ರ ಕಡಿಮೆಯಾಗಬೇಕೆನ್ನುವ ನಿಟ್ಟಿನಲ್ಲಿಯೂ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ
ಇನ್ನು ಮುಂದೆ ಯಾವುದೇ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ಸ್ವಚ್ಛತೆ ಮಾಡಿಸುವಂತಿಲ್ಲ. ಮಾಡಿಸಿದಲ್ಲಿ ಸಂಬಂಧಪಟ್ಟ ಶಾಲಾ ಪ್ರಮುಖರ ಮೇಲೆ ಕ್ರಮ ಕೈಗೊಳ್ಳಲಾಗುವುದು. 50 ಮಕ್ಕಳಿಗಿಂತ ಕಡಿಮೆ ಸಂಖ್ಯೆಯ ಮಕ್ಕಳಿರುವ ಶಾಲೆಗಳಿಗೆ ವಾರ್ಷಿಕ 10 ಸಾವಿರ ರೂ.ಗಳನ್ನು ಸರ್ಕಾರ ಸ್ವಚ್ಛತೆಗಾಗಿ ನೀಡುತ್ತಿತ್ತು. ಅದನ್ನು ಮುಖ್ಯಮಂತ್ರಿಗಳು 20 ಸಾವಿರ ರೂ.ಗೆ ಹೆಚ್ಚಳ ಮಾಡಿದ್ದಾರೆ. ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿ ಸ್ವಚ್ಛತೆಗೆ ಗಮನಕೊಡಲಾಗುವುದು ಎಂದರು.