ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಹೊರೆ ತಗ್ಗಿಸಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ನಾಲ್ಕು ನಿಗಮಗಳಿಗೆ ಪ್ರಸಕ್ತ ಸಾಲಿನ ಮೋಟಾರ್ ವಾಹನ ತೆರಿಗೆ ವಿನಾಯಿತಿ ನೀಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಶಕ್ತಿ ಯೋಜನೆ ಜಾರಿಯಾದ ನಂತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಗಮಗಳ ಆದಾಯ ಹೆಚ್ಚಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. ನಾಲ್ಕು ನಿಗಮಗಳ ಮೇಲೆ 4000 ಕೋಟಿ ರೂಪಾಯಿಗೂ ಹೆಚ್ಚಿನ ಹೊಣೆಗಾರಿಕೆ ಇದೆ. ಇದನ್ನು ತೀರಿಸಲು ಸಾಕಷ್ಟು ಶ್ರಮ ಅಗತ್ಯವಿದೆ. ಶಕ್ತಿ ಯೋಜನೆಗೆ ನಿಗಮಗಳಿಂದ ವ್ಯಯ ಮಾಡಿದ ಮೊತ್ತದ ಮರುಪಾವತಿ ವಿಳಂಬವಾಗುತ್ತಿದೆ. ಕೊಂಚ ಆರ್ಥಿಕ ಸಮಸ್ಯೆಯನ್ನು ಸಾರಿಗೆ ನಿಗಮಗಳು ಎದುರಿಸುತ್ತಿವೆ.
ಈ ಹಿನ್ನೆಲೆಯಲ್ಲಿ ನಿಗಮಗಳಿಗೆ ಆರ್ಥಿಕ ಶಕ್ತಿ ತುಂಬಲು ಸರ್ಕಾರ ಮೋಟಾರ್ ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲು ಚಿಂತನೆ ನಡೆಸಿದೆ. ಸಾರಿಗೆ ಇಲಾಖೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕುರಿತಾಗಿ ಪ್ರಸ್ತಾವನೆ ಸಲ್ಲಿಸಿದ್ದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕೂಡ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.