ಬೆಂಗಳೂರು: ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಸರ್ಕಾರ ಮುಂದಾಗಿದ್ದು, ಬೆಳಗಾವಿ ಅಧಿವೇಶನದಲ್ಲಿ ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್(ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯದ ವಿಧಾನ ತಡೆಗಟ್ಟುವಿಕೆ ಕ್ರಮಗಳು) ವಿಧೇಯಕ ಮಂಡಿಸಲು ತೀರ್ಮಾನಿಸಿದೆ.
ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮಸೂದೆಯ ಪ್ರಕಾರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದಲ್ಲಿ 10 ಕೋಟಿ ರೂಪಾಯಿ ದಂಡ, 12 ವರ್ಷದವರೆಗೆ ಜೈಲು ಶಿಕ್ಷೆ, ಅಕ್ರಮ ಆಸ್ತಿ ಜಪ್ತಿಯಂತಹ ಕಠಿಣ ನಿಯಮ ಜಾರಿಗೆ ಪ್ರಸ್ತಾಪಿಸಲಾಗಿದೆ.
ಪರೀಕ್ಷಾರ್ಥಿ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿ ಆಕ್ರಮದಲ್ಲಿ ಭಾಗಿಯಾಗುವುದು ದೃಢಪಲ್ಲಿ 5 ವರ್ಷದವರೆಗೆ ಜೈಲು ಶಿಕ್ಷೆ, 10 ಲಕ್ಷ ರೂಪಾಯಿ ದಂಡ ಮತ್ತು ದಂಡ ಕಟ್ಟಲು ವಿಫಲವಾದರೆ 9 ತಿಂಗಳ ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡಲಾಗಿದೆ.
ಮೂರನೇ ವ್ಯಕ್ತಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಂಚು ರೂಪಿಸಿದಲ್ಲಿ ಅಥವಾ ಅಕ್ರಮದಲ್ಲಿ ಭಾಗಿಯಾದರೆ 8 ವರ್ಷಕ್ಕಿಂತ ಕಡಿಮೆ ಇಲ್ಲದಂತೆ ಗರಿಷ್ಠ 12 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದರೊಂದಿಗೆ 15 ಲಕ್ಷ ರೂ.ಗೆ ಕಡಿಮೆ ಇಲ್ಲದಂತೆ ಗರಿಷ್ಠ 10 ಕೋಟಿ ರೂ.ವರೆಗೆ ದಂಡ ವಿಧಿಸಲಾಗುವುದು. ದಂಡ ಪಾವತಿಸಲು ವಿಫಲನಾದರೆ ಎರಡು ವರ್ಷದವರೆಗೆ ಜೈಲುವಾಸ ಅನುಭವಿಸಬೇಕು.
ತಪ್ಪಿತಸ್ಥ ಅಕ್ರಮದಿಂದ ಗಳಿಸಿದ ಸ್ಥಿರ ಅಥವಾ ಚರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದಲ್ಲಿ ಜಾಮೀನು ರಹಿತ ಅಪರಾಧವಾಗಲಿದೆ. ನೇಮಕಾತಿ ಪರೀಕ್ಷೆ ಅಕ್ರಮ ಗಂಭೀರ ಸ್ವರೂಪದ ಪ್ರಕರಣ ಎಂದು ಪರಿಗಣಿಸಲಾಗಿದೆ. ಪರೀಕ್ಷಾರ್ಥಿ ತಪ್ಪಿತಸ್ಥ ಎಂದು ದೃಢಪಟ್ಟರೆ ಮುಂದಿನ ಎರಡು ವರ್ಷ ಯಾವುದೇ ನೇಮಕಾತಿ ಪರೀಕ್ಷೆಗಳಿಂದ ಡಿಬಾರ್ ಆಗಲಿದ್ದಾನೆ.