ಮುಡಾ ಹಗರಣ ಬೆನ್ನಲ್ಲೇ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಇದ್ದ ಅಧಿಕಾರವನ್ನು ನಗರಾಭಿವೃದ್ಧಿ ಇಲಾಖೆ ಮೊಟಕುಗೊಳಿಸಿದ್ದು, ಅದನ್ನು ನಗರಾಭಿವೃದ್ಧಿ ಪ್ರಾಧಿಕಾರಗಳು, ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ಆಯುಕ್ತರಿಗೆ ವರ್ಗಾಯಿಸಿದೆ.
ಜುಲೈ 8ರಂದು ಈ ಕುರಿತು ಆದೇಶ ಹೊರಡಿಸಲಾಗಿದೆ. ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳ ಬಜೆಟ್ ಪರಿಶೀಲನೆ ಮತ್ತು ಅನುಮೋದನೆ ಆಡಿಟ್ ವರದಿಗಳ ಪರಿಶೀಲನೆಯನ್ನು ಆಯುಕ್ತಾಲಯದ ಆಯುಕ್ತರೇ ನಡೆಸಲಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರಗಳ ಸಭೆಗಳ ನಡಾವಳಿ ಪರಿಶೀಲಿಸಿ ಅಗತ್ಯ ಮಾರ್ಗದರ್ಶನ ನೀಡುವ ಮತ್ತು ಒಂದು ಕೋಟಿ ರೂ. ಮೇಲ್ಪಟ್ಟ ಹಣಕಾಸಿನ ವ್ಯವಹಾರಗಳ ನಿರ್ವಹಣೆಯ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರಗಳ ಚಟುವಟಿಕೆಗಳು, ಸಿಬ್ಬಂದಿ ಮೇಲೆ ನಿಗಾ ಇಡುವ ಜವಾಬ್ದಾರಿಯನ್ನು ಕೂಡ ಆಯುಕ್ತರಿಗೆ ನೀಡಲಾಗಿದೆ. ಪ್ರಾಧಿಕಾರಗಳ ಮೂಲಕ ಸರ್ಕಾರಕ್ಕೆ ಸಲ್ಲಿಕೆಯಾಗುವ ಎಲ್ಲಾ ದಾಖಲೆಗಳು ಇದೇ ಆಯುಕ್ತರ ಮೂಲಕ ಸಲ್ಲಿಕೆಯಾಗಬೇಕು ಎಂದು ಆದೇಶಿಸಲಾಗಿದೆ.