ನವದೆಹಲಿ: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಸನ್ನಡತೆ ಆಧಾರದ ಮೇಲೆ ಅವಧಿಗೂ ಮೊದಲೇ 50 ವರ್ಷ ಮೇಲ್ಪಟ್ಟ ಮಹಿಳಾ ಹಾಗೂ ತೃತೀಯ ಲಿಂಗಿ ಕೈದಿಗಳನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಅದೇ ರೀತಿ 60 ವರ್ಷ ಮೇಲ್ಪಟ್ಟ ಪುರುಷ ಮತ್ತು ವಿಕಲಚೇತನ ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಶಿಕ್ಷೆಯ ಅವಧಿ ಪೂರ್ಣಗೊಳಿಸಿ ದಂಡದ ಮೊತ್ತವನ್ನು ಪಾವತಿಸಲಾಗದೆ ಜೈಲಿನಲ್ಲಿರುವ ಬಡವರು ಮತ್ತು ನಿರ್ಗತಿಕ ಕೈದಿಗಳ ದಂಡದ ಮೊತ್ತವನ್ನು ಸಂಪೂರ್ಣವಾಗಿ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ.
ಜೀವಾವಧಿ ಶಿಕ್ಷೆ, ಮರಣದಂಡನೆ ಶಿಕ್ಷೆಗೆ ಗುರಿಯಾದವರು, ಅತ್ಯಾಚಾರ, ಹಣ ಅಕ್ರಮ ವರ್ಗಾವಣೆ, ಭಯೋತ್ಪಾದನೆ ಕೃತ್ಯ, ವರದಕ್ಷಿಣೆ ಕಿರುಕುಳ, ಮಾನವ ಕಳ್ಳ ಸಾಗಾಣಿಕೆ, ರಾಷ್ಟ್ರೀಯ ಭದ್ರತಾ ಕಾಯ್ದೆ, ಶಸ್ತ್ರಾಸ್ತ್ರಗಳ ಅಕ್ರಮ ಸಂಗ್ರಹ ಮೊದಲಾದ ಪ್ರಕರಣಗಳಲ್ಲಿ ಜೈಲು ಸೇರಿದವರಿಗೆ ಬಿಡುಗಡೆಯ ಭಾಗ್ಯ ಇರುವುದಿಲ್ಲ.