ನಾಡ ದೇವತೆ ಭುವನೇಶ್ವರಿಯ ಏಕರೂಪದ ಚಿತ್ರವನ್ನು ಅಧಿಕೃತಗೊಳಿಸಿ ಶೀಘ್ರದಲ್ಲೇ ಸರ್ಕಾರ ಆದೇಶ ಹೊರಡಿಸಲಿದೆ. ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಡಿ. ಮಹೇಂದ್ರ ಅವರ ನೇತೃತ್ವದಲ್ಲಿ ಚಿತ್ರ ಕಲಾವಿದರ ಸಮಿತಿ ಈ ಚಿತ್ರವನ್ನು ಸಿದ್ದಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.
ಈ ಮೊದಲು ಸರಸ್ವತಿ, ದುರ್ಗೆ ಒಳಗೊಂಡಂತೆ ನಾನಾ ದೇವತೆಗಳ ಚಿತ್ರವನ್ನು ನಾಡ ದೇವತೆ ಚಿತ್ರವಾಗಿ ಬಳಸಲಾಗುತ್ತಿತ್ತು. ಹೀಗಾಗಿ ಏಕರೂಪದ ಚಿತ್ರ ಇರಬೇಕೆಂಬ ಬೇಡಿಕೆ ಬಹುಕಾಲದಿಂದಲೂ ಇದ್ದು, ಇದೀಗ ಮಹೇಂದ್ರ ನೇತೃತ್ವದ ಸಮಿತಿ ಚಿತ್ರವನ್ನು ಸಿದ್ದಪಡಿಸಿದ್ದು ಇದಕ್ಕೆ ಸರ್ಕಾರವೂ ಸಮ್ಮತಿಸಿದೆ ಎನ್ನಲಾಗಿದೆ.
ಈಗ ರೂಪಿಸಿರುವ ಚಿತ್ರದಲ್ಲಿ ನಾಡ ದೇವತೆ ಭುವನೇಶ್ವರಿಯ ಹಿಂದೆ ಕರ್ನಾಟಕದ ನಕಾಶೆಯಿದ್ದು, ಜೊತೆಗೆ ನಾಡನ್ನಾಳಿದ ಎಲ್ಲ ಸಾಮ್ರಾಜ್ಯಗಳ ಲಾಂಛನ ಅಡಕಗೊಂಡಿದೆ. ಚಿತ್ರದ ಹಿನ್ನೆಲೆಯಲ್ಲಿರುವ ಪಶ್ಚಿಮ ಘಟ್ಟ ಸಸ್ಯ ರಾಶಿಯು ರಾಜ್ಯದ ಪ್ರಕೃತಿ ಸೌಂದರ್ಯವನ್ನು ಬಿಂಬಿಸಿದೆ.