ಬೆಂಗಳೂರು: ವಿದ್ಯಾರ್ಥಿಗಳ ಕೊರತೆ ಇರುವ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಕೆಲಸದಿಂದ ಬಿಡುಗಡೆ ಮಾಡುವಂತೆ ಸರ್ಕಾರ ಆದೇಶಿಸಿದೆ.
ಆಡಳಿತ ಮಂಡಳಿಗಳಿಗೆ ಈ ಕುರಿತಾಗಿ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ 821 ಅನುದಾನಿತ ಪದವಿಪೂರ್ವ ಕಾಲೇಜುಗಳಿದ್ದು, ಸರ್ಕಾರದ ನಿಯಮಾವಳಿಯ ಪ್ರಕಾರ ಕಾಯಂ ಉಪನ್ಯಾಸಕರ ನೇಮಕಾತಿಗೆ ಆಯಾ ವಿಷಯಗಳಲ್ಲಿ ಕನಿಷ್ಠ 40 ವಿದ್ಯಾರ್ಥಿಗಳು ಇರಬೇಕು. ಅನೇಕ ಕಾಲೇಜುಗಳಲ್ಲಿ ಪ್ರತಿವರ್ಷ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿದೆ. ಅದರಲ್ಲಿಯೂ ಕೆಲವು ವಿಷಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿತವಾಗುತ್ತಿದ್ದು, ಅಂತಹ ಕಾಲೇಜುಗಳಲ್ಲಿ ಅನುದಾನಿತ ವೇತನ ಪಡೆಯುತ್ತಿರುವ ಉಪನ್ಯಾಸಕರಿಗೆ ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ.
ಅನುದಾನಿತ ಕಾಲೇಜುಗಳಲ್ಲಿನ 4291 ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಬೋಧಕ ಹುದ್ದೆಗಳ ಭರ್ತಿಗೆ ಶಾಲಾ ಶಿಕ್ಷಣ ಇಲಾಖೆ ಇತ್ತೀಚೆಗೆ ಅನುಮೋದನೆ ನೀಡಿದ್ದು, ವೇತನಾನುದಾನಕ್ಕೆ ಒಳಪಟ್ಟ ಕಾಲೇಜುಗಳಲ್ಲಿ ಆಡಳಿತ ಮಂಡಳಿಗಳು ನೇಮಕಾತಿ ಪ್ರಕ್ರಿಯೆ ಆರಂಭಿಸಿವೆ. ಇದರ ಬೆನ್ನಲ್ಲೇ ವಿದ್ಯಾರ್ಥಿಗಳ ಕೊರತೆ ಇರುವ ಕಾಲೇಜುಗಳ ವಿಷಯವಾರು ಉಪನ್ಯಾಸಕರನ್ನು ಕೆಲಸದಿಂದ ಬಿಡುಗಡೆ ಮಾಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಈ ಆದೇಶವನ್ನು ಹಿಂಪಡೆಯಬೇಕೆಂಬ ಒತ್ತಾಯ ಕೇಳಿ ಬಂದಿದೆ.