ಬೆಂಗಳೂರು: ರಾಜ್ಯದ ಎಲ್ಲಾ ಪಿಡಿಒ ಹುದ್ದೆಗಳಳನ್ನು ಗ್ರೂಪ್ ಬಿ ವೃಂದಕ್ಕೆ ಮೇಲ್ದರ್ಜೆಗೇರಿಸುವ ಕುರಿತಾಗಿ ಪರಿಶೀಲಿಸಲು ಸರ್ಕಾರ ಸಮಿತಿ ರಚಿಸಿ ಆದೇಶಿಸಿದೆ.
ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು, ನೌಕರರ ವೃಂದ ಸಂಘಗಳ ಬೇಡಿಕೆ ಹಿನ್ನೆಲೆಯಲ್ಲಿ ಸರ್ಕಾರದಿಂದ ಗ್ರೂಪ್ ಬಿ ವೃಂದಕ್ಕೆ ಪಿಡಿಒ ಹುದ್ದೆಗಳನ್ನು ಮೇಲ್ದರ್ಜಗೇರಿಸುವ ಕುರಿತಾಗಿ ಪರಿಶೀಲಿಸಲು ಸಮಿತಿ ರಚಿಸಿದೆ.
ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರಾದ ಡಾ.ಅರುಂಧತಿ ಚಂದ್ರಶೇಖರ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ. ಆನಂದ್, ಬೋಧಕರಾದ ಕವಿತಾ ರಾಜರಾಮ್, ಗ್ರಾಮೀಣಾಭಿವೃದ್ಧಿ ಇಲಾಖೆ ವಿಶೇಷ ಕಾರ್ಯದರ್ಶಿ ಚಂದ್ರಶೇಖರ್, ನಿರ್ದೇಶಕ ಎನ್. ನೋಮೇಶ್ ಕುಮಾರ್, ನಿವೃತ್ತ ನಿರ್ದೇಶಕರಾದ ಪಿ. ಶಿವಶಂಕರ್, ಎಂ.ಕೆ. ಕೆಂಪೇಗೌಡ, ಕರ್ನಾಟಕ ಪಂಚಾಯತ್ ರಾಜ್ ಅಭಿವೃದ್ಧಿ ಅಧಿಕಾರಿಗಳ ಕಲ್ಯಾಣ ಸಂಘದ ಅಧ್ಯಕ್ಷ ರಾಜು ವಾರದ, ಗ್ರಾಮೀಣಾಭಿವೃದ್ಧಿ ಇಲಾಖೆ ಕಾನೂನು ಸಲಹೆಗಾರ ಬಿ.ಎಸ್. ಬೂದಿಹಾಳ ಸಮಿತಿಯ ಸದಸ್ಯರಾಗಿದ್ದಾರೆ. ಪಂಚಾಯತ್ ರಾಜ್ ಆಯುಕ್ತಾಲಯದ ನಿರ್ದೇಶಕ ಆರ್. ಅಮರೇಶ್ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ಈ ಸಮಿತಿ ನೀಡುವ ವರದಿ ಆಧರಿಸಿ ಸರ್ಕಾರ ಪಿಡಿಒ ಹುದ್ದೆಗಳನ್ನು ಗ್ರೂಪ್ ಬಿ ವೃಂದಕ್ಕೆ ಮೇಲ್ದರ್ಜೆಗೇರಿಸುವ ಕುರಿತು ನಿರ್ಧಾರ ಕೈಗೊಳ್ಳಲಿದೆ.