ಬೆಂಗಳೂರು: ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ರಚಿಸಲಾದ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಿತಿಗಳ ಪದಾಧಿಕಾರಿಗಳಿಗೆ ಗೌರವಧನ ಮತ್ತು ಭತ್ಯೆ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.
ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇರುವ ಸಮಿತಿಗಳು ತಿಂಗಳಿಗೆ ಗರಿಷ್ಠ ಎರಡು ಸಭೆ ನಡೆಸಬಹುದಾಗಿದೆ. ನಾನಾ ಇಲಾಖೆಗಳ ಮೂಲಕ ಗ್ಯಾರಂಟಿ ಯೋಜನೆಗಳ ಅನುಸ್ಥಾನಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಸಮನ್ವಯ ಸಾಧಿಸುವ ಉದ್ದೇಶದಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿಯನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಜಿಲ್ಲಾ ಸಮಿತಿಗಳು ಸಭೆ ನಡೆಸಲು ಜಿಪಂ ಸಭಾಂಗಣ, ತಾಲೂಕು ಸಮಿತಿಗಳು ಸಭೆ ನಡೆಸಲು ತಾಪಂ ಸಭಾಂಗಣಗಳನ್ನು ಬಳಕೆ ಮಾಡಲು ಅನುಮತಿ ನೀಡಲಾಗಿದೆ. ಜಿಲ್ಲಾ ಸಮಿತಿ ಅಧ್ಯಕ್ಷರಿಗೆ ಮಾಸಿಕ 40,000 ರೂ. ಗೌರವ ಧನ, ಉಪಾಧ್ಯಕ್ಷರಿಗೆ ಪ್ರತಿ ಸಭೆಗೆ 1200 ರೂಪಾಯಿ ಭತ್ಯೆ, ಸದಸ್ಯರಿಗೆ ಪ್ರತಿ ಸಭೆಗೆ 1,100 ರೂ. ಭತ್ಯೆ ನೀಡಲಾಗುವುದು. ತಾಲೂಕು ಸಮಿತಿ ಅಧ್ಯಕ್ಷರಿಗೆ 25,000 ರೂ. ಮಾಸಿಕ ಗೌರವ ಧನ ನಿಗದಿಪಡಿಸಲಾಗಿದೆ. ಸದಸ್ಯರಿಗೆ ಪ್ರತಿ ಸಭೆಗೆ 1000 ಭತ್ಯೆ ನಿಗದಿಪಡಿಸಲಾಗಿದೆ.
ರಾಜ್ಯ ಮಟ್ಟದ ಗ್ಯಾರಂಟಿಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ, ಉಪಾಧ್ಯಕ್ಷರಿಗೆ ರಾಜ್ಯ ಸಚಿವ ದರ್ಜೆ ಸಚಿವರ ಸ್ಥಾನಮಾನ ನೀಡಲಾಗಿದ್ದುಮ ತಲಾ 12 ಆಪ್ತ ಸಿಬ್ಬಂದಿ ಹೊಂದಬಹುದಾಗಿದೆ.