ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಕನಿಷ್ಠ ಮತ್ತು ಗರಿಷ್ಠ ನಿವೃತ್ತಿ ವೇತನ ಮತ್ತು ನಿವೃತ್ತಿ ಸೌಲಭ್ಯಗಳನ್ನು ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ.
ವಯೋ ನಿವೃತ್ತಿ ಸೇರಿದಂತೆ ಇತರೆ ಐದು ನಿವೃತ್ತಿ ವೇತನದ ಕನಿಷ್ಠ ಮೊತ್ತವನ್ನು ಮಾಸಿಕ 8500 ರೂ.ಗಳಿಂದ 13,500 ರೂ. ಗಳಿಗೆ ಹೆಚ್ಚಿಸಲಾಗಿದೆ. ಗರಿಷ್ಠ ನಿವೃತ್ತಿ ವೇತನವನ್ನು 75,300 ರೂ.ಗಳಿಂದ 1.20 ಲಕ್ಷ ರೂಪಾಯಿವರೆಗೆ ಪರಿಸ್ಕರಿಸಲಾಗಿದೆ.
ಕುಟುಂಬ ನಿವೃತ್ತಿ ವೇತನದ ಗರಿಷ್ಟ ಪರಿಮಿತಿಯನ್ನು ಪ್ರಸ್ತುತ ಇರುವ 45,180 ರೂ.ನಿಂದ 80,400ರೂ.ಗೆ ಹೆಚ್ಚಳ ಮಾಡಲಾಗಿದೆ. ಸೇವೆಯಲ್ಲಿರುವಾಗಲೇ ಸರ್ಕಾರಿ ನೌಕರರು ಮರಣ ಹೊಂದಿದ ಸಂದರ್ಭದಲ್ಲಿ ನೀಡುವ ಪರಿಹಾರ ಮೊತ್ತವನ್ನು ಒಂದು ವರ್ಷಕ್ಕಿಂತ ಕಡಿಮೆ ಸೇವೆಗೆ ಇದ್ದ ಪ್ರಸ್ತುತ ಇದ್ದ ಮೊತ್ತಕ್ಕೆ ಎರಡರಷ್ಟು, ಒಂದು ವರ್ಷಕ್ಕಿಂತ ಹೆಚ್ಚು ಐದು ವರ್ಷಕ್ಕಿಂತ ಕಡಿಮೆ ಸೇವಾ ಅವಧಿಗೆ ಪ್ರಸ್ತುತ ಇದ್ದ ಮೊತ್ತಕ್ಕೆ ಆರರಷ್ಟು, ಐದರಿಂದ ಇಪ್ಪತ್ತು ವರ್ಷಗಳ ವರೆಗಿನ ಸೇವೆಗೆ ಪ್ರಸ್ತುತ ಮೊತ್ತಕ್ಕಿಂತ 12ರಷ್ಟು, ಇಪ್ಪತ್ತು ವರ್ಷಗಳಿಗಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ ಅವರ ಪ್ರತಿ ಅರ್ಧ ವರ್ಷದ ಅರ್ಹತಾ ಸೇವೆಗೆ ಪ್ರಸ್ತುತ ಇದ್ದ ಉಪಲಬ್ಧಗಳ ಅರ್ಧದಷ್ಟು ನೀಡಬೇಕು. ಈ ಉಪದಾನದ ಗರಿಷ್ಠ ಮೊತ್ತ 33 ಲಕ್ಷ ರೂ., ಮರಣ ಉಪದಾನವು 20 ಲಕ್ಷ ರೂ.ಗಳಿಗೆ ಮೀರಬಾರದು ಎಂದು ಹೇಳಲಾಗಿದೆ.