ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ನವೆಂಬರ್ 1ರೊಳಗೆ ಕೆಂಪು -ಹಳದಿ ಟ್ಯಾಗ್(ಕೊರಳು ದಾರ) ಕಡ್ಡಾಯವಾಗಿ ಧರಿಸಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರಿ ನೌಕರರು, ನಿಗಮ –ಮಂಡಳಿ, ಸರ್ಕಾರಿ ಸ್ವಾಮ್ಯದ ನೌಕರರು ನವೆಂಬರ್ 1ರೊಳಗೆ ಕೆಂಪು ಹಳದಿ ದಾರದೊಂದಿಗೆ ಗುರುತಿನ ಚೀಟಿ ಧರಿಸಬೇಕಿದೆ. ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಅಭಿಯಾನದ ಹಿನ್ನೆಲೆಯಲ್ಲಿ ಈ ಕುರಿತು ನಿರ್ಧಾರ ಕೈಗೊಂಡು ಆಗಸ್ಟ್ 16ರಂದು ಅನೇಕ ಆದೇಶ ಹೊರಡಿಸಲಾಗಿದೆ.
ಆದರೂ ಅನೇಕ ನೌಕರರು ಟ್ಯಾಗ್ ಧರಿಸುತ್ತಿಲ್ಲ. ಅನೇಕ ಇಲಾಖೆಗಳಲ್ಲಿ ನೌಕರರಿಗೆ ಟ್ಯಾಗ್ ನೀಡಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಇತ್ತೀಚಿಗೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಕಡ್ಡಾಯವಾಗಿ ಟ್ಯಾಗ್ ಧರಿಸಲು ಕ್ರಮ ವಹಿಸುವಂತೆ ತಿಳಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಡಿಪಿಎಆರ್ ನಿಂದ ಆದೇಶ ಹೊರಡಿಸಲಾಗಿದೆ. ಕೆಂಪು ಹಳದಿ ಕೊರಳುದಾರ ಲಭ್ಯವಿಲ್ಲದಿದ್ದಲ್ಲಿ ಇಲಾಖೆಯ ಮುಖ್ಯಸ್ಥರು ಅಥವಾ ಸಕ್ಷಮ ಪ್ರಾಧಿಕಾರಗಳ ಗಮನಕ್ಕೆ ತರಬೇಕು. ನವೆಂಬರ್ 1ರೊಳಗೆ ಎಲ್ಲಾ ನೌಕರರ ಬಳಿ ಕೆಂಪು ಹಳದಿ ಬಣ್ಣದ ಕೊರಳು ದಾರ ಇರಬೇಕೆಂದು ಸೂಚನೆ ನೀಡಲಾಗಿದೆ.