ನವದೆಹಲಿ: ತಂಬಾಕು ಉತ್ಪನ್ನ ಪ್ಯಾಕ್ ಗಳ ಮೇಲೆ ಸರ್ಕಾರದಿಂದ ನಿರ್ಧಿಷ್ಟಪಡಿಸಲಾದ ಆರೋಗ್ಯ ಎಚ್ಚರಿಕೆಗಳ ಹೊಸ ಚಿತ್ರ ಪ್ರದರ್ಶಿಸುವಂತೆ ಸೂಚಿಸಲಾಗಿದೆ.
ಆರೋಗ್ಯ ಸಚಿವಾಲಯದ ವತಿಯಿಂದ ಎಲ್ಲಾ ತಂಬಾಕು ಉತ್ಪನ್ನ ಪ್ಯಾಕ್ ಗಳ ಮೇಲೆ ಹೊಸ ನಿರ್ದಿಷ್ಟ ಆರೋಗ್ಯ ಎಚ್ಚರಿಕೆಗಳನ್ನು ಹಾಕುವಂತೆ ಸೂಚಿಸಲಾಗಿದೆ. ಈ ವರ್ಷ ಡಿಸೆಂಬರ್ 1 ರಿಂದ ಜಾರಿಗೆ ಬರುವಂತೆ ತಿದ್ದುಪಡಿ ನಿಯಮಗಳು ಅನ್ವಯವಾಗುತ್ತವೆ.
2022 ರ ಡಿಸೆಂಬರ್ 1 ರಂದು ಅಥವಾ ನಂತರ ತಯಾರಿಸಲಾದ ಅಥವಾ ಆಮದು ಮಾಡಿಕೊಳ್ಳಲಾದ ಅಥವಾ ಪ್ಯಾಕ್ ಮಾಡಲಾದ ಎಲ್ಲಾ ತಂಬಾಕು ಉತ್ಪನ್ನಗಳು, ತಂಬಾಕು ನೋವಿನ ಸಾವಿಗೆ ಕಾರಣವಾಗುವ ಪಠ್ಯದ ಆರೋಗ್ಯ ಎಚ್ಚರಿಕೆಯೊಂದಿಗೆ ಚಿತ್ರವನ್ನು ಪ್ರದರ್ಶಿಸಬೇಕಿದೆ ಎಂದು ಸಚಿವಾಲಯ ಹೇಳಿದೆ.
ಮುಂದಿನ ವರ್ಷ ಡಿಸೆಂಬರ್ 1 ರ ನಂತರ ತಯಾರಿಸಿದ ಅಥವಾ ಆಮದು ಮಾಡಿದ ಅಥವಾ ಪ್ಯಾಕ್ ಮಾಡಿದ ತಂಬಾಕು ಉತ್ಪನ್ನಗಳು ‘ಆರೋಗ್ಯ ಎಚ್ಚರಿಕೆ – ತಂಬಾಕು ಬಳಕೆದಾರರು ಚಿಕ್ಕ ವಯಸ್ಸಿನಲ್ಲೇ ಸಾಯುತ್ತಾರೆ’ ಎಂಬ ಪಠ್ಯದೊಂದಿಗೆ ಚಿತ್ರವನ್ನು ಪ್ರದರ್ಶಿಸಬೇಕು ಎಂದು ಹೇಳಲಾಗಿದೆ.
ಸಿಗರೇಟ್ ಗಳ ತಯಾರಿಕೆ, ಉತ್ಪಾದನೆ, ಪೂರೈಕೆ, ಆಮದು ಅಥವಾ ವಿತರಣೆಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ತೊಡಗಿರುವ ಯಾವುದೇ ವ್ಯಕ್ತಿ ಎಲ್ಲಾ ತಂಬಾಕು ಉತ್ಪನ್ನಗಳ ಪ್ಯಾಕೇಜ್ ಗಳು ನಿರ್ದಿಷ್ಟಪಡಿಸಿದ ಆರೋಗ್ಯ ಎಚ್ಚರಿಕೆಗಳನ್ನು ಹೊಂದಿರಬೇಕು ಎಂದು ಸಚಿವಾಲಯ ಹೇಳಿದೆ.
ನಿಬಂಧನೆ ಉಲ್ಲಂಘನೆಯಾದಲ್ಲಿ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ(ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ನಿಯಂತ್ರಣ, ಉತ್ಪಾದನೆ, ಸರಬರಾಜು ಮತ್ತು ವಿತರಣೆ) ಕಾಯಿದೆ – 2003 ರಲ್ಲಿ ಸೂಚಿಸಿದಂತೆ ಜೈಲು ಶಿಕ್ಷೆ ಅಥವಾ ದಂಡದೊಂದಿಗೆ ಶಿಕ್ಷಾರ್ಹ ಅಪರಾಧವಾಗಿದೆ.