alex Certify ಸರ್ಕಾರಿ ಭೂಮಿ ಒತ್ತುವರಿದಾರರಿಗೆ ಶಾಕ್: ಸೆಪ್ಟೆಂಬರ್ ನಿಂದ ರಾಜ್ಯಾದ್ಯಂತ ತೆರವು ಕಾರ್ಯಾಚರಣೆ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಭೂಮಿ ಒತ್ತುವರಿದಾರರಿಗೆ ಶಾಕ್: ಸೆಪ್ಟೆಂಬರ್ ನಿಂದ ರಾಜ್ಯಾದ್ಯಂತ ತೆರವು ಕಾರ್ಯಾಚರಣೆ ಆರಂಭ

ಬೆಂಗಳೂರು: ರಾಜ್ಯದ್ಯಂತ ಸೆಪ್ಟೆಂಬರ್ ನಿಂದ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲಾಗುವುದು. ಸರ್ಕಾರಿ ಭೂಮಿ ಸಂರಕ್ಷಣೆಗಾಗಿ ಆರಂಭಿಸಿದ ಲ್ಯಾಂಡ್ ಬೀಟ್ ಆ್ಯಪ್ ಆಧರಿಸಿ ತೆರವು ಕಾರ್ಯಚರಣೆ ನಡೆಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಸೋಮವಾರ ಬೆಂಗಳೂರು ವಿಭಾಗದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯಾದ್ಯಂತ ಕಂದಾಯ, ಅರಣ್ಯ, ಶಿಕ್ಷಣ, ಲೋಕೋಪಯೋಗಿ ಇಲಾಖೆಗೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸೇರಿದ 1.41 ಕೋಟಿ ಎಕರೆ ಸರ್ಕಾರಿ ಜಮೀನು ಇದೆ ಎಂಬುದು ಲ್ಯಾಂಡ್ ಬೀಟ್ ಆ್ಯಪ್ ನಿಂದ ಖಚಿತವಾಗಿದೆ. ಸೆಪ್ಟೆಂಬರ್ ನಿಂದ ಈ ಆ್ಯಪ್ ಆಧರಿಸಿ ಒತ್ತುವರಿ ತೆರವು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ ಎಂಟು ತಿಂಗಳಿಂದ ಗ್ರಾಮ ಆಡಳಿತಾಧಿಕಾರಿಗಳ ಮೂಲಕ ಅವರ ವೃತ್ತದ ಸರ್ಕಾರಿ ಜಮೀನು ಎಷ್ಟಿದೆ ಎಂಬ ವಿವರಗಳನ್ನು ಲ್ಯಾಂಡ್ ಬೀಟ್ ಆ್ಯಪ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಸಂಪೂರ್ಣ ಮಾಹಿತಿ ಇದೆ. ಜಿಲ್ಲಾವಾರು, ತಾಲೂಕುವಾರು, ಗ್ರಾಮವಾರು, ಸರ್ವೇ ನಂಬರ್ ವಾರು ಲೊಕೇಶನ್ ಮತ್ತು ವಿಸ್ತೀರ್ಣದ ಮಾಹಿತಿ ಲಭ್ಯವಿದೆ. ಎರಡನೇ ಹಂತದಲ್ಲಿ 14 ಲಕ್ಷ ಸರ್ವೇ ನಂಬರ್ ಗಳಿಗೆ ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ಖುದ್ದು ಬೀಟ್ ಮಾಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಅನೇಕ ಕಡೆ ಒತ್ತುವರಿ ಪತ್ತೆಯಾಗಿದ್ದು, ಸೆಪ್ಟೆಂಬರ್ ನಿಂದ ರೈತರ ಭೂಮಿ ಹೊರತುಪಡಿಸಿ ಉಳಿದೆಲ್ಲ ಒತ್ತುವರಿಗಳನ್ನು ತಹಶೀಲ್ದಾರ್ ಗಳ ಮೂಲಕ ತೆರವುಗೊಳಿಸಲಾಗುವುದು. ರಾಜ್ಯದಾದ್ಯಂತ 4.8 ಕೋಟಿ ಜಮೀನಿನ ಮಾಲೀಕತ್ವ ಇದ್ದು, ಪಹಣಿಗಳಿಗೆ ಆಧಾರ್ ದೃಢೀಕರಣ ಕಾರ್ಯ ವೇಗವಾಗಿ ನಡೆಯುತ್ತಿದೆ. 2.68 ಕೋಟಿ ರೈತರ ಖಾತೆಗಳಿಗೆ ಆಧಾರ್ ಸೀಡಿಂಗ್ ಮುಕ್ತಾಯವಾಗಿದ್ದು, ಈ ತಿಂಗಳಾಂತ್ಯಕ್ಕೆ ಕಾರ್ಯವನ್ನು ಪೂರ್ಣಗೊಳಿಸಲಾಗುವುದು. ಆಧಾರ್ ಸೀಡಿಂಗ್ ನಿಂದಾಗಿ ಅಕ್ರಮವಾಗಿ ಜಮೀನು ಮಾರಾಟ ಮಾಡುವುದು ಸಂಪೂರ್ಣ ನಿಲ್ಲಲಿದೆ. ಮುಖ್ಯವಾಗಿ ದಾಖಲೆಗಳಲ್ಲಿ ಕೈಬಿಟ್ಟು ಹೋಗಿದ್ದ ಮತ್ತು ಒತ್ತುವರಿಯಾಗಿದ್ದ ಸರ್ಕಾರದ ಜಮೀನುಗಳ ವಿವರಗಳು ದೊರೆತಿದ್ದು, ರಾಜ್ಯದ್ಯಂತ 2.20 ಲಕ್ಷ ಎಕರೆ ಜಮೀನು ಸರ್ಕಾರಿ ಭೂಮಿ ಎಂದು ಗುರುತಿಸದ ಆಸ್ತಿಗಳು ಪತ್ತೆಯಾಗಿದೆ. ಆಧಾರ್ ಸೀಡಿಂಗ್ ನಿಂದಾಗಿ 3.50 ಲಕ್ಷ ಎಕರೆ ಸರ್ಕಾರಿ ಭೂಮಿ ಪತ್ತೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...