ನಿಮ್ಮ ಬಳಿ 50 ವರ್ಷದ ಹಳೆ ಕಾರಿದ್ದರೆ ಅಥವಾ ವಿಂಟೇಜ್ ಕಾರಿನ ಮಾಲೀಕರಾಗಿದ್ದರೆ ನಿಮಗೊಂದು ಮಹತ್ವದ ಸುದ್ದಿಯಿದೆ. ಸರ್ಕಾರ ವಿಂಟೇಜ್ ಕಾರ್ ಗಾಗಿ ಹೊಸ ನಿಯಮ ಜಾರಿಗೆ ತಂದಿದೆ. ಇದಕ್ಕಾಗಿ ಸರ್ಕಾರ ಹೊಸ ಮಾನದಂಡ ನಿಗದಿಪಡಿಸಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು, ಕೇಂದ್ರ ಮೋಟಾರು ವಾಹನ ಕಾಯ್ದೆ 1989 ಅನ್ನು ತಿದ್ದುಪಡಿ ಮಾಡಿದೆ. ಈ ಹೊಸ ನಿಯಮಗಳ ಪ್ರಕಾರ, 50 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಳೆಯದಾದ ಮತ್ತು ಮೂಲ ರೂಪದಲ್ಲಿ ಸಂರಕ್ಷಿಸಲ್ಪಟ್ಟಿರುವ, ಯಾವುದೇ ಮಹತ್ವದ ಬದಲಾವಣೆಗಳಿಗೆ ಒಳಗಾಗದ ಎಲ್ಲಾ ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರ ವಾಹನಗಳನ್ನು ವಿಂಟೇಜ್ ಮೋಟಾರು ವಾಹನವೆಂದು ಗುರುತಿಸಲಾಗುತ್ತದೆ.
ಅನೇಕ ರಾಜ್ಯಗಳಲ್ಲಿ ನೋಂದಣಿ ಪ್ರಕ್ರಿಯೆಯನ್ನು ನಿಯಂತ್ರಿಸಲು ಯಾವುದೇ ನಿಯಮಗಳಿಲ್ಲ. ಹೊಸ ನಿಯಮಗಳು, ನೋಂದಣಿಗೆ ಸಂಬಂಧಿಸಿದ ಕೆಲಸವನ್ನು ಸುಲಭಗೊಳಿಸಲಿವೆ. ಹೊಸ ನಿಯಮಗಳ ಪ್ರಕಾರ, ಫಾರ್ಮ್ 20 ರ ಪ್ರಕಾರ ನೋಂದಣಿ ಅಥವಾ ಮರು ನೋಂದಣಿಗೆ ಅರ್ಜಿಯನ್ನು ಸಲ್ಲಿಸಲಾಗುತ್ತದೆ.
ವಿಮಾ ಪಾಲಿಸಿಯೊಂದಿಗೆ, ಅಗತ್ಯ ಶುಲ್ಕ, ಆಮದು ಮಾಡಿದ ವಾಹನಗಳ ಪ್ರವೇಶ ಇನ್‌ವಾಯ್ಸ್ ಮತ್ತು ಈಗಾಗಲೇ ನೋಂದಾಯಿತ ವಾಹನವಾದಲ್ಲಿ ಹಳೆಯ ಆರ್‌ಸಿ ಸಲ್ಲಿಸಬೇಕು. ಫಾರ್ಮ್ 23 ಎ ಪ್ರಕಾರ, ನೋಂದಣಿ ಪ್ರಮಾಣಪತ್ರವನ್ನು ರಾಜ್ಯ ನೋಂದಣಿ ಪ್ರಾಧಿಕಾರವು 60 ದಿನಗಳಲ್ಲಿ ನೀಡಲಿದೆ.
ಹೊಸ ನೋಂದಣಿ ಶುಲ್ಕ 20,000 ರೂಪಾಯಿ ಮತ್ತು ಮರು ನೋಂದಣಿಗೆ 5,000 ರೂಪಾಯಿ ನೀಡಬೇಕು. ವಾಣಿಜ್ಯ ಉದ್ದೇಶಗಳಿಗಾಗಿ ವಿಂಟೇಜ್ ಮೋಟಾರು ವಾಹನಗಳನ್ನು ರಸ್ತೆಗಿಳಿಸಲು ಅನುಮತಿ ನೀಡಲಾಗುವುದಿಲ್ಲ. ಹಾಗಾಗಿ ವಿಂಟೇಜ್ ಕಾರನ್ನು ಹೊಂದಿದ್ದವರು ಅದರ ನೋಂದಣಿ ನವೀಕರಿಸುವ ಅಗತ್ಯವಿದೆ.