ಬೆಂಗಳೂರು: ಹೃದಯಾಘಾತ ಪಾರ್ಶ್ವವಾಯುವಿಗೆ ಉಚಿತ ಇಂಜೆಕ್ಷನ್ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. ಪಾರ್ಶ್ವವಾಯು ಮತ್ತು ಹೃದಯಾಘಾತಕ್ಕೆ ಒಳಗಾದವರನ್ನು ಪ್ರಾಣಾಪಾಯದಿಂದ ಪಾರು ಮಾಡಲು ಅಗತ್ಯವಿರುವ ದುಬಾರಿ ಬೆಲೆಯ ಇಂಜೆಕ್ಷನ್ ಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಉಚಿತವಾಗಿ ನೀಡಲಾಗುವುದು.
ಪಾರ್ಶ್ವವಾಯುವಿನಿಂದ ಅಂಗಾಂಗ ವೈಫಲ್ಯ, ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಅಗತ್ಯವಿರುವ 60 ಸಾವಿರ ರೂಪಾಯಿ ದರದ ಆರ್.ಟಿ. ಪ್ಲಸ್ ಚುಚ್ಚುಮದ್ದು ನೀಡಲಾಗುವುದು. ಹೃದಯಾಘಾತಕ್ಕೆ ಒಳಗಾದವರಿಗೆ 90 ನಿಮಿಷಗಳಲ್ಲಿ ಚಿಕಿತ್ಸೆ ಸಿಗದಿದ್ದರೆ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ಹೃದಯಾಘಾತ ನಿರ್ವಹಣೆಗೆ 40,000 ಬೆಲೆಯ ಟೆನೆಕ್ಟ್ ಪ್ಲಸ್ ಇಂಜೆಕ್ಷನ್ ನೀಡಲಾಗುವುದು.
ಈ ಆರ್.ಟಿ. ಪ್ಲಸ್ ಮತ್ತು, ಟೆನೆಕ್ಟ್ ಪ್ಲಸ್ ಇಂಜೆಕ್ಷನ್ ಗಳನ್ನು ತಾಲೂಕು ಆಸ್ಪತ್ರೆಗಳಿಗೆ ಶೀಘ್ರವೇ ಪೂರೈಕೆ ಮಾಡಲಾಗುವುದು. ಇದುವರೆಗೆ ಈ ಇಂಜೆಕ್ಷನ್ ಗಳು ಸರ್ಕಾರಿ ವ್ಯವಸ್ಥೆಯಡಿ ನಿಮಾನ್ಸ್ ಮತ್ತು ಜಯದೇವ ಹೃದ್ರೋಗ ಸಂಸ್ಥೆ ಹೊರತುಪಡಿಸಿ ಬೇರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುತ್ತಿರಲಿಲ್ಲ. ತುರ್ತು ಸಂದರ್ಭ ದಲ್ಲಿ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಿತ್ತು. ಆರೋಗ್ಯ ಇಲಾಖೆಯ ಸಾಂಕ್ರಾಮಿಕವಲ್ಲದ ರೋಗಗಳ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಈ ಇಂಜೆಕ್ಷನ್ ಒದಗಿಸಲಾಗುವುದು.
ಬಿಪಿಎಲ್ ಮತ್ತು ಎಪಿಎಲ್ ಎಂದು ಪರಿಗಣಿಸದೆ ಅಗತ್ಯ ಇರುವ ಎಲ್ಲರಿಗೂ ಪರೀಕ್ಷೆ ನಡೆಸಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಸ್ಟೆಮಿ ಯೋಜನೆಯಡಿ ಉಚಿತವಾಗಿ ಇಂಜೆಕ್ಷನ್ ನೀಡಲಾಗುವುದು ಎಂದು ಹೇಳಲಾಗಿದೆ.