ಬೆಂಗಳೂರು: ಪದವಿ ಕಾಲೇಜುಗಳ ಪ್ರವೇಶ ಶುಲ್ಕ ಹೆಚ್ಚಳಕ್ಕೆ ಸರ್ಕಾರ ಚಿಂತನೆ ನಡೆಸಿದ್ದು, ಇದರ ಬೆನ್ನಲ್ಲೇ ಪದವಿ ಪೂರ್ವ ಕಾಲೇಜುಗಳ ಪ್ರವೇಶ ಶುಲ್ಕ ಕೂಡ ಹೆಚ್ಚಳ ಮಾಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
2024 -25 ನೇ ಸಾಲಿನಿಂದ ಪಿಯುಸಿ ಹೆಚ್ಚಳವಾಗುವ ಸಾಧ್ಯತೆ ಇದೆ. ಪಿಯು ಕಾಲೇಜಿನ ಪ್ರವೇಶ ಶುಲ್ಕ ಮಾತ್ರವಲ್ಲ, ಸಂಯೋಜನೆ ಶುಲ್ಕ ನವೀಕರಣ ಶುಲ್ಕ ಸೇರಿದಂತೆ ಎಲ್ಲಾ ರೀತಿಯ ಶುಲ್ಕ ಹೆಚ್ಚಳಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಪ್ರತಿ ಮೂರು ವರ್ಷಕ್ಕೊಮ್ಮೆ ಶುಲ್ಕ ಪರಿಷ್ಕರಣೆ ಮಾಡಬೇಕಿರುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 2018-19 ರಲ್ಲಿ ಶುಲ್ಕ ಹೆಚ್ಚಳ ಮಾಡಿದ ನಂತರ ಇದುವರೆಗೂ ಶುಲ್ಕ ಹೆಚ್ಚಳ ಮಾಡಿಲ್ಲ. 2013-14ರಲ್ಲಿ ಶೇಕಡ 30ರಷ್ಟು, 2018-19 ರಲ್ಲಿ ಶೇಕಡ 60ರಷ್ಟು ಶುಲ್ಕ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೆ ಶುಲ್ಕ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.