ಬೆಂಗಳೂರು: ಸರ್ಕಾರ ಮುದ್ರಾಂಕ ಶುಲ್ಕದಲ್ಲಿ ಭಾರಿ ಏರಿಕೆ ಮಾಡಿದೆ. ಈ ಮೂಲಕ ಬಡವರಿಗೆ ಶಾಕ್ ನೀಡಿದೆ. ಸಾಲ ಪ್ರಮಾಣ ಪತ್ರ, ದಾನ ಪತ್ರ, ಆಸ್ತಿ ವಿಭಜನೆ, ಖುಲಾಸೆ ಪತ್ರ, ಟ್ರಸ್ಟ್ ಗಳ ಪ್ರಮಾಣ ಪತ್ರ, ಕಂಪನಿಗಳ ಷೇರು ಹಂಚಿಕೆ ಪತ್ರ, ಪವರ್ ಆಫ್ ಅಟಾರ್ನಿ ಆಸ್ತಿ ಪತ್ರ ಮೊದಲಾದ ದಾಖಲೆಗಳ ಮೇಲಿನ ಮುದ್ರಾಂಕ ಶುಲ್ಕ ಭಾರಿ ಹೆಚ್ಚಳವಾಗಿದೆ.
20 ರೂ. ಇದ್ದ ಅಫಿಡವಿಟ್ ಶುಲ್ಕ 50 ರೂ.ಗೆ ಹೆಚ್ಚಳ ಮಾಡಲಾಗಿದೆ. ಸಣ್ಣ ಪುಟ್ಟ ಅಫಿಡವಿಟ್ ಗೆ ನೋಟರಿಗೆ 500 ರೂಪಾಯಿವರೆಗೆ ಕೊಡಬೇಕಾಗಬಹುದು. ಪಾರ್ಟಿಷನ್ ಗೂ ಶುಲ್ಕ ಹೆಚ್ಚಳ ಮಾಡಿರುವುದು ದಾಖಲೆಯ ನೋಂದಣಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕುಟುಂಬದೊಳಗೆ ಆಸ್ತಿ ವಿಭಜನೆ ಆದಾಗ ದಾಖಲೆ ಸರಿಪಡಿಸಿಕೊಳ್ಳಬೇಕು. ಆದರೆ ಮುದ್ರಾಂಕ ಶುಲ್ಕ ಹೆಚ್ಚಳದಿಂದ ಇದರ ಮೇಲೆ ಪರಿಣಾಮ ಬೀರುತ್ತದೆ. ಕಡಿಮೆ ಶುಲ್ಕ ಇದ್ದರೆ ಜನ ದಾಖಲೆ ಸರಿಪಡಿಸಿಕೊಳ್ಳುತ್ತಾರೆ. ಈ ಹಿಂದೆ 6-7 ಸಾವಿರ ರೂ.ನಲ್ಲಿ ಮುಗಿಯುತ್ತಿದ್ದ ನೋಂದಣಿ ಪ್ರಕ್ರಿಯೆ ಪರಿಷ್ಕೃತ ದರದ ಪ್ರಕಾರ 25 ರಿಂದ 30 ಸಾವಿರ ರೂ. ವರೆಗೆ ಖರ್ಚಾಗುತ್ತದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 1000 ರೂ. ಇದ್ದ ಶುಲ್ಕ 5 ಸಾವಿರ ರೂ., ಸಿಎಂಸಿ ವ್ಯಾಪ್ತಿಯಲ್ಲಿ 500 ರೂ. ಇದ್ದ ಶುಲ್ಕ 3 ಸಾವಿರ ರೂ.ವರೆಗೆ ಹೆಚ್ಚಳವಾಗಿದೆ. ಕೃಷಿ ಭೂಮಿಗೆ 250 ರೂ.ನಿಂದ 1000 ರೂ.ಗೆ ಹೆಚ್ಚಳ ಮಾಡಲಾಗಿದೆ.
ಬ್ಯಾಂಕ್ ನಲ್ಲಿ ಗೃಹ ನಿರ್ಮಾಣ ಮೊದಲಾದ ಸಾಲ ಪಡೆಯಲು ಡಿಟಿಡಿ ದರವನ್ನು ಶೇಕಡ 0.2 ರಿಂದ ಶೇಕಡ 0.5ಕ್ಕೆ ಹೆಚ್ಚಳ ಮಾಡಲಾಗಿದ್ದು, ಇದರಿಂದ ಬಡ್ಡಿದರ ಕೂಡ ಹೆಚ್ಚಳವಾಗುತ್ತದೆ.
10 ಲಕ್ಷ ರೂ. ಸಾಲದ ಮೇಲೆ ಶೇಕಡ 0.1 ರಷ್ಟು ಇದ್ದ ಮುದ್ರಾಂಕ ಶುಲ್ಕ ಶೇಕಡ 0.5 ರಷ್ಟು ಆಗಿದೆ. ಅಫಿಡ್ ವಿಟ್ 20ರೂ. ನಿಂದ 100 ರೂ., ಸ್ವಾಧೀನವಿಲ್ಲದ ಮಾರಾಟ ಒಪ್ಪಂದ ಶೇಕಡ 0.1 ರಿಂದ ಶೇಕಡ 0.5ರಷ್ಟು, ಕ್ಯಾನ್ಸಲೇಷನ್ ಡೀಡ್ 100 ರೂ.ನಿಂದ 500 ರೂ., ಮಾರ್ಟ್ ಗೇಜ್ ಗೆ 100 ರೂ.ನಿಂದ 200 ರೂ.ಗೆ ಹೆಚ್ಚಳ ಮಾಡಲಾಗಿದೆ.