ನವದೆಹಲಿ: ಕೊವ್ಯಾಕ್ಸಿನ್ ಲಸಿಕೆಯನ್ನು ರಫ್ತು ಮಾಡಲು ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ನೀಡಲಾಗಿದೆ. ಹೈದರಾಬಾದ್ ನ ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆಯನ್ನು ವಾಣಿಜ್ಯ ಉದ್ದೇಶಕ್ಕೆ ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಭಾರತ್ ಬಯೋಟೆಕ್‌ನ ಕೋವಿಡ್-19 ಲಸಿಕೆ ಕೋವಾಕ್ಸಿನ್‌ನ ವಾಣಿಜ್ಯ ರಫ್ತಿಗೆ ಸರ್ಕಾರ ಹಸಿರು ನಿಶಾನೆ ತೋರಿದ್ದು, ಕೇಂದ್ರದ ಒಪ್ಪಿಗೆಯೊಂದಿಗೆ ಭಾರತದ ಸ್ಥಳೀಯ ಲಸಿಕೆ ಕೋವಾಕ್ಸಿನ್ ಖರೀದಿಸಲು ಬಯಸುವ ದೇಶಗಳಿಗೆ ಶೀಘ್ರದಲ್ಲೇ ಕಳುಹಿಸಲಾಗುವುದು.
ಕೋವಿಡ್ -19 ಗಾಗಿ ಭಾರತದ ಮೊದಲ ಸ್ಥಳೀಯ ಲಸಿಕೆಯಾದ ಕೋವಾಕ್ಸಿನ್ ಮಾರಣಾಂತಿಕ ಸಾಂಕ್ರಾಮಿಕ ವೈರಸ್ ವಿರುದ್ಧ ಶೇಕಡ 77.8 ರಷ್ಟು ಪರಿಣಾಮಕಾರಿಯಾಗಿದೆ ಎಂದು ಇತ್ತೀಚೆಗೆ ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ವರದಿ ತಿಳಿಸಿದೆ.
ನವೆಂಬರ್ 3, 2021 ರಂದು, ವಿಶ್ವ ಆರೋಗ್ಯ ಸಂಸ್ಥೆ(WHO) ಕೋವಾಕ್ಸಿನ್ ಗೆ ಬಹುನಿರೀಕ್ಷಿತ ತುರ್ತು ಬಳಕೆಯ ಅನುಮತಿ ನೀಡಿದೆ. ಯುಕೆ ಸರ್ಕಾರ ಕೋವಾಕ್ಸಿನ್ ಲಸಿಕೆ ಪಡೆದ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ನವೆಂಬರ್ 22, 2021 ರಿಂದ ಪ್ರವೇಶಕ್ಕೆ ಅವಕಾಶ ನೀಡಿದ್ದು, ಅನುಮೋದಿತ ಕೋವಿಡ್ ಲಸಿಕೆಗಳ ಪಟ್ಟಿಗೆ ಕೊವ್ಯಾಕ್ಸಿನ್ ಸೇರಿಸಿದೆ.
ಭಾರತ್ ಬಯೋಟೆಕ್ ಕೋವಾಕ್ಸಿನ್ ಅನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR) ಮತ್ತು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ(NIV) ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದೆ.