ಬೆಂಗಳೂರು: ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಸೇರಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತುಪ್ಪದ ಕಲಬೆರಕೆ ತಡೆಗೆ ಮಹತ್ವದ ಕ್ರಮ ಕೈಗೊಂಡಿದೆ. ನಂದಿನಿ ಬ್ರಾಂಡ್ ಹೊರತುಪಡಿಸಿ ಎಲ್ಲಾ ಬ್ರಾಂಡ್ ಗಳ ತುಪ್ಪದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ.
ಖಾಸಗಿ ಸಂಸ್ಥೆಗಳು ಸರಬರಾಜ ಮಾಡುವ ತುಪ್ಪಗಳ ಸ್ಯಾಂಪಲ್ ಸಂಗ್ರಹಿಸಿ ತಪಾಸಣೆ ನಡೆಸಲು ಆಹಾರ ಮತ್ತು ಗುಣಮಟ್ಟ ಇಲಾಖೆ ಮುಂದಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಮಾರಾಟವಾಗುವ ನಂದಿನಿ ಹೊರತುಪಡಿಸಿದ ಎಲ್ಲಾ ತುಪ್ಪಗಳ ಸ್ಯಾಂಪಲ್ ಸಂಗ್ರಹಿಸಿ ಪರಿಶೀಲಿಸಿ ಗುಣಮಟ್ಟ ಕಾಪಾಡಲು ಸೂಚಿಸಲಾಗಿದೆ. ದೇವಸ್ಥಾನದಲ್ಲಿ ಕೊಡುವ ಪ್ರಸಾದಗಳ ಸ್ಯಾಂಪಲ್ ಬದಲು ತುಪ್ಪದ ಪರಿಶೀಲನೆ ಕೈಗೊಳ್ಳುವಂತೆ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ತಮಿಳುನಾಡು ಸೇರಿದಂತೆ ವಿವಿಧೆಡೆಯಿಂದ ತುಪ್ಪ ಪೂರೈಕೆಯಾಗುತ್ತಿದ್ದು, ಎಲ್ಲಾ ತುಪ್ಪಗಳ ಸ್ಯಾಂಪಲ್ ಸಂಗ್ರಹಿಸಿ ಪರಿಶೀಲಿಸಲು ತಿಳಿಸಲಾಗಿದೆ. ತಿರುಪತಿ ಲಡ್ಡು ವಿಚಾರದಲ್ಲಿ ಜನರಲ್ಲಿ ಗೊಂದಲ ಉಂಟಾಗಿದೆ. ಇದು ಆಘಾತಕಾರಿ ಬೆಳವಣಿಗೆಯಾಗಿದ್ದು, ರಾಜ್ಯ ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ಕೈಗೊಂಡಿದೆ ಎಂದು ಹೇಳಿದ್ದಾರೆ.
ಎಲ್ಲಾ ಬ್ರಾಂಡ್ ತುಪ್ಪದ ಕಾನೂನಾತ್ಮಕ ಆಹಾರ ಮಾದರಿಯನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಉಪ ಆಯುಕ್ತರು ಆದೇಶ ಹೊರಡಿಸಿದ್ದಾರೆ.