alex Certify BIG NEWS: ಪಠ್ಯಪುಸ್ತಕಗಳ ಸಮಗ್ರ ಪರಿಷ್ಕರಣೆಗೆ 37 ವಿಷಯ ತಜ್ಞರ ಸಮಿತಿ ರಚನೆ: ಸರ್ಕಾರದ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಠ್ಯಪುಸ್ತಕಗಳ ಸಮಗ್ರ ಪರಿಷ್ಕರಣೆಗೆ 37 ವಿಷಯ ತಜ್ಞರ ಸಮಿತಿ ರಚನೆ: ಸರ್ಕಾರದ ಆದೇಶ

ಬೆಂಗಳೂರು: ಪಠ್ಯ ಪುಸ್ತಕಗಳನ್ನು ರಾಷ್ಟ್ರೀಯ ಪಠ್ಯಚೌಕಟ್ಟಿನಡಿ ಸಮಗ್ರವಾಗಿ ಪುನರ್ ಪರಿಷ್ಕರಿಸಲು 37 ವಿಷಯ ತಜ್ಞರನ್ನು ಒಳಗೊಂಡ ಸಮಿತಿ ರಚಿಸಿ ಸರ್ಕಾರ ಆದೇಶಿಸಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಹಿತ್ ಚಕ್ರತೀರ್ಥ ಸಮಿತಿ ವಿವಿಧ ತರಗತಿ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಿದ್ದು, ಪ್ರಸಕ್ತ ಸಾಲಿನ ಮಟ್ಟಿಗೆ ಅದನ್ನು ಕೈ ಬಿಟ್ಟು ತಿದ್ದೋಲೆ ಹೊರಡಿಸಿದ್ದ ಕಾಂಗ್ರೆಸ್ ಸರ್ಕಾರ ಈಗ ಎಲ್ಲಾ ಪಠ್ಯಪುಸ್ತಕಗಳನ್ನು ರಾಷ್ಟ್ರೀಯ ಪಠ್ಯ ಚೌಕಟ್ಟಿನಡಿಯಲ್ಲಿ ಪರಿಷ್ಕರಿಸಲು ಸಮಿತಿ ರಚಿಸಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದರಿಂದ 10ನೇ ತರಗತಿವರೆಗಿನ ಕನ್ನಡ ಪ್ರಥಮ ಹಾಗೂ ದ್ವಿತೀಯ ಭಾಷೆ ಪಠ್ಯಪುಸ್ತಕಗಳು, 9 ಮತ್ತು 10ನೇ ತರಗತಿಯ ಕನ್ನಡ ತೃತೀಯ ಭಾಷೆ ಪಠ್ಯ ಪುಸ್ತಕಗಳು, ಆರರಿಂದ ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲಾಗಿತ್ತು. ಕೆಲವು ಪಠ್ಯಗಳ ಕೈಬಿಟ್ಟು ಕೆಲವು ಆರ್.ಎಸ್.ಎಸ್. ನಾಯಕರು, ಬಲಪಂಥೀಯರ ಬರಹಗಳನ್ನು ಪಠ್ಯದಲ್ಲಿ ಸೇರಿಸಲಾಗಿತ್ತು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಪಠ್ಯ ಪುಸ್ತಕಗಳ ಪರಿಷ್ಕರಣೆ ಕೈ ಬಿಟ್ಟು ಈ ಪರಿಷ್ಕರಣೆಗೆ ಮೊದಲು ಇದ್ದ ಪಠ್ಯಗಳನ್ನು 2023-24ನೇ ಸಾಲಿಗೆ ಮುಂದುವರೆಸಲು ತಿದ್ದೋಲೆ ಹೊರಡಿಸಿತ್ತು.

ಮುಂದಿನ ಶೈಕ್ಷಣಿಕ ಶಾಲೆಗೆ ಈ ಪಠ್ಯ ಪುಸ್ತಕಗಳ ಪರಿಷ್ಕರಿಸಲು ಸಮಿತಿ ರಚಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆ ಕುಮಟಾದ ನಿವೃತ್ತ ಪ್ರಾಧ್ಯಾಪಕ ಡಾ. ಮಂಜುನಾಥ್ ಜಿ. ಹೆಗ್ಡೆ ಅವರನ್ನು ಪಠ್ಯ ಪುಸ್ತಕ ಸಮಿತಿಯ ಮುಖ್ಯ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ. ಇವರ ನೇತೃತ್ವದಲ್ಲಿ ವಿವಿಧ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಐವರು ಅಧ್ಯಕ್ಷರ ನೇತೃತ್ವದಲ್ಲಿ ಪ್ರತ್ಯೇಕ ಉಪ ಸಮಿತಿಗಳನ್ನು ರಚಿಸಿ 37 ವಿಷಯ ತಜ್ಞರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಮೂರು ತಿಂಗಳೊಳಗೆ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಿಕೊಡುವಂತೆ ಸರ್ಕಾರ ಸೂಚಿಸಿದೆ.

ಒಂದರಿಂದ ಹತ್ತನೇ ತರಗತಿ ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಆಂಜನಪ್ಪ ಅವರ ಅಧ್ಯಕ್ಷತೆಯಲ್ಲಿ 8 ಸದಸ್ಯರ ಸಮಿತಿ ರಚಿಸಲಾಗಿದೆ.

ಕನ್ನಡ ದ್ವಿತೀಯ ಭಾಷೆ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ಚಿಕ್ಕಮಗಳೂರಿನ ಬಸವನಹಳ್ಳಿಯ ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಹೆಚ್.ಎನ್. ಸತ್ಯನಾರಾಯಣ ಅವರ ಅಧ್ಯಕ್ಷತೆಯಲ್ಲಿ 7 ಸದಸ್ಯರನ್ನು ನೇಮಿಸಲಾಗಿದೆ.

9 ಮತ್ತು 10ನೇ ತರಗತಿ ಕನ್ನಡ ತೃತೀಯ ಭಾಷೆ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ದಾವಣಗೆರೆ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಮಂಜಣ್ಣ ಅಧ್ಯಕ್ಷತೆಯಲ್ಲಿ ಇಬ್ಬರು ಸದಸ್ಯರನ್ನು ನೇಮಕ ಮಾಡಲಾಗಿದೆ.

ಆರು ಮತ್ತು ಏಳನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕ ಪರಿಷ್ಕರಣೆಗೆ ಕಲಬುರ್ಗಿ ಕೇಂದ್ರೀಯ ವಿವಿ ಸಾರ್ವಜನಿಕ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕಿರಣ್ ಎಂ. ಗಾಜನೂರು ಅವರ ಅಧ್ಯಕ್ಷತೆಯಲ್ಲಿ ಐವರು ಸದಸ್ಯರ ನೇಮಿಸಲಾಗಿದೆ.

8 ಮತ್ತು 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪರಿಷ್ಕರಣೆ ಸಮಿತಿಗೆ ಬೆಂಗಳೂರು ಇತಿಹಾಸ ವಿಭಾಗದ ಡಾ. ಅಶ್ವತ್ಥ್ ನಾರಾಯಣ ಅಧ್ಯಕ್ಷತೆಯಲ್ಲಿ 8 ಸದಸ್ಯರ ಸಮಿತಿ ರಚಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...