ದಾವಣಗೆರೆ: ಹೊಸ ಪಿಂಚಣಿ ವ್ಯವಸ್ಥೆ ನಾಲ್ಕೈದು ತಿಂಗಳಲ್ಲಿ ರದ್ದಾಗುವ ನಿರೀಕ್ಷೆ ಇದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದ್ದಾರೆ.
ದಾವಣಗೆರೆಯ ಬಂಟರ ಭವನದಲ್ಲಿ ಬುಧವಾರ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಹೊಸ ಪಿಂಚಣಿ ವ್ಯವಸ್ಥೆ ರದ್ದುಪಡಿಸಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಸಂಘ ಹೋರಾಟ ನಡೆಸಲಿದೆ ಎಂದು ಹೇಳಿದ್ದಾರೆ.
ಏಳನೇ ವೇತನ ಆಯೋಗ ವರದಿ ಜಾರಿ, ಆರೋಗ್ಯ ಸೌಲಭ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಬೇಡಿಕೆಗಳನ್ನು ಈಡೇರಿಸಿದ್ದು, ನೌಕರರು ಆಭಾರಿಯಾಗಿದ್ದೇವೆ. ಇನ್ನು ನಾಲ್ಕೈದು ತಿಂಗಳಲ್ಲಿ ಹೊಸ ಪಿಂಚಣಿ ವ್ಯವಸ್ಥೆ ರದ್ದಾಗುವ ನಿರೀಕ್ಷೆ ಇದೆ. ಒಂದು ವೇಳೆ ರದ್ದಾಗದಿದ್ದರೆ ಎಲ್ಲಾ ನೌಕರರು ಒಗ್ಗೂಡಿ ಹೋರಾಟ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಸಂಬಂಧಿಸಿದಂತೆ ಸರ್ಕಾರ ಅಧ್ಯಯನ ಸಮಿತಿ ರಚಿಸಿದ್ದು, ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ. ಸರ್ಕಾರದ ಅಧಿಕಾರದ ಅವಧಿ ಇನ್ನೂ 3-4 ವರ್ಷ ಇರುವುದರಿಂದ ಪಿಂಚಣಿ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಇದೆ ಎಂದು ಷಡಾಕ್ಷರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.