ನವದೆಹಲಿ: ಉದ್ಯೋಗಿಗಳು ನಿರ್ದಿಷ್ಟ ಸ್ಥಳಕ್ಕೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಲು ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸರ್ಕಾರಿ ನೌಕರರು ನಿರ್ದಿಷ್ಟ ಸ್ಥಳಕ್ಕೆ ವರ್ಗಾವಣೆ ಮಾಡಬೇಕೆಂದು ಒತ್ತಾಯ ಮಾಡುವಂತಿಲ್ಲ. ಸರ್ಕಾರದ ಅಗತ್ಯತೆಯನ್ನು ಆಧರಿಸಿ ನಿಗದಿತ ಸ್ಥಳಕ್ಕೆ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕಿದೆ ಎಂದು ಹೇಳಲಾಗಿದೆ.
ಉತ್ತರಪ್ರದೇಶದ ಅಮ್ರೋಹಾದಿಂದ ಗೌತಮ್ ಬುದ್ಧ ನಗರದ ಕಾಲೇಜಿಗೆ ವರ್ಗಾವಣೆ ಮಾಡುವಂತೆ ಕೋರಿ ಉಪನ್ಯಾಸಕಿಯೊಬ್ಬರು ಉತ್ತರಪ್ರದೇಶ ಶಿಕ್ಷಣ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು. ಅವರ ಮನವಿ ಅರ್ಜಿಯನ್ನು 2017 ರಲ್ಲಿ ಶಿಕ್ಷಣ ಪ್ರಾಧಿಕಾರ ತಿರಸ್ಕರಿಸಿತ್ತು. ಉಪನ್ಯಾಸಕಿ ಪ್ರಾಧಿಕಾರದ ವಿರುದ್ಧ ಅಲಹಾಬಾದ್ ಹೈಕೋರ್ಟ್ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದು, ವಿಚಾರಣೆ ನಡೆಸಿದ ಹೈಕೋರ್ಟ್ ಉಪನ್ಯಾಸಕಿಯ ಅರ್ಜಿಯನ್ನು ವಜಾಗೊಳಿಸಿತ್ತು.
ನಂತರ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಉಪನ್ಯಾಸಕಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಸರ್ಕಾರಿ ಉದ್ಯೋಗಿಗಳು ನಿರ್ದಿಷ್ಟ ಸ್ಥಳಕ್ಕೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಲು ಸಾಧ್ಯವಿಲ್ಲವೆಂದು ಹೇಳಿದೆ. ಉದ್ಯೋಗದಾತರ, ಸರ್ಕಾರದ ಅಗತ್ಯವನ್ನು ಆಧರಿಸಿ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕೆಂದು ತಿಳಿಸಿದೆ. ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಅನಿರುದ್ಧ್ ಬೋಸ್ ಅವರುಗಳಿದ್ದ ಸುಪ್ರೀಂಕೋರ್ಟ್ ನ್ಯಾಯಪೀಠ, ಉದ್ಯೋಗಿಯನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ಅವರು ನಿರ್ದಿಷ್ಟ ಸ್ಥಳಕ್ಕೆ ವರ್ಗಾಯಿಸಬೇಕೆಂದು ಒತ್ತಾಯಿಸುವುದಲ್ಲ. ಸರ್ಕಾರದ ಅಗತ್ಯತೆಯನ್ನು ಪರಿಗಣಿಸಿ ಉದ್ಯೋಗಿಗಳನ್ನು ವರ್ಗಾಯಿಸಲಾಗುತ್ತದೆ ಎಂದು ಹೇಳಲಾಗಿದೆ.
ಕೋರ್ಟ್ ಗಮನಿಸಿರುವಂತೆ ಅರ್ಜಿ ಸಲ್ಲಿಸಿದ್ದ ಉಪನ್ಯಾಸಕಿ 2000 ದಿಂದ 2013 ರವರೆಗೆ 13 ವರ್ಷಗಳ ಕಾಲ ಗೌತಮಬುದ್ಧ ನಗರದ ಕಾಲೇಜಿನಲ್ಲಿ ಕೆಲಸ ಮಾಡಿದ್ದು, ಅದೇ ಸಂಸ್ಥೆಯಲ್ಲಿ ಮುಂದುವರೆಸುವುದು ಸಮರ್ಥನೀಯವಲ್ಲ ಎಂದು ಕೋರ್ಟ್ ತಿಳಿಸಿದೆ.