ಬೆಂಗಳೂರು: ಡಿಸೆಂಬರ್ 27 ರಂದು ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ನಡೆಯಲಿದೆ. 2024 -29ರ ಅವಧಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆಗೆ ನಡೆಯುವ ಚುನಾವಣೆಯ ಕಣ ರಂಗೇರಿದ್ದು, ನೌಕರರ ಓಲೈಕೆಗೆ ಭರ್ಜರಿ ಕಸರತ್ತು ನಡೆಸಲಾಗಿದೆ.
102 ಮತಕ್ಷೇತ್ರವಾರು ಚುನಾವಣೆ ನಡೆಯುತ್ತಿವೆ. ಅಂತಿಮವಾಗಿ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಖಜಾಂಚಿ ಸ್ಥಾನಕ್ಕೆ ಡಿಸೆಂಬರ್ 27ರಂದು ಚುನಾವಣೆ ನಡೆಯಲಿದೆ. ರಾಜ್ಯ ಪರಿಷತ್ ನ 102 ಸ್ಥಾನಗಳನ್ನು ಒಳಗೊಂಡಂತೆ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 42 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಬಾರಿ ನೌಕರರ ಸಂಘದ ಚುನಾವಣೆಯಲ್ಲಿ ಓಲೈಕೆಯ ಕಸರತ್ತು ನಡೆದಿದೆ. ಸಂಘದ ಮೇಲೆ ಹಿಡಿತ ಸಾಧಿಸಲು ಈ ಹಿಂದೆ ಅಧ್ಯಕ್ಷರಾಗಿದ್ದ ಮಂಜೇಗೌಡ ನೇತೃತ್ವದಲ್ಲಿ ಕೆಲವು ಮಾಜಿ ಪದಾಧಿಕಾರಿಗಳು ಒಟ್ಟುಗೂಡಿ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಆಯ್ಕೆಗೆ ಸಭೆ ನಡೆಸಿದ್ದಾರೆ. ಸಿ.ಎಸ್. ಷಡಾಕ್ಷರಿ ತಂಡ ಈಗಾಗಲೇ ಚುನಾವಣೆ ಗೆಲುವಿಗೆ ಪ್ರಯತ್ನ ನಡೆಸಿದ್ದು, ಅವಿರೋಧ ಆಯ್ಕೆ ಸೇರಿ ಈಗಾಗಲೇ ಫಲಿತಾಂಶ ಪ್ರಕಟವಾದ 53 ಸ್ಥಾನಗಳ ಪೈಕಿ ಷಡಾಕ್ಷರಿ ಬಣದವರೇ ಹೆಚ್ಚಾಗಿದ್ದಾರೆ.
ತಾಲೂಕು ಯೋಜನಾ ಶಾಖೆಗಳ ಕಾರ್ಯಕಾರಿ ಸಮಿತಿ ನಿರ್ದೇಶಕರ ಸ್ಥಾನಗಳಿಗೆ ಅಕ್ಟೋಬರ್ 9ರಿಂದ ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದು, 28 ರ ವರೆಗೆ ನಡೆಯಲಿದೆ.
ತಾಲೂಕು ಮತ್ತು ಯೋಜನಾ ಶಾಖೆಗಳ ಅಧ್ಯಕ್ಷರು, ಖಜಾಂಚಿ, ರಾಜ್ಯ ಪರಿಷತ್ ಸದಸ್ಯರ ಚುನಾವಣಾ ಪ್ರಕ್ರಿಯೆ ಅಕ್ಟೋಬರ್ 30 ರಿಂದ ನವೆಂಬರ್ 16ರವರೆಗೆ ನಡೆಯಲಿದೆ.
ಜಿಲ್ಲಾ ಶಾಖೆಗಳ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣೆ ಅಕ್ಟೋಬರ್ 28 ರಿಂದ ನವೆಂಬರ್ 16ರವರೆಗೆ ನಡೆಯಲಿದೆ.
ಜಿಲ್ಲಾಧ್ಯಕ್ಷರು ಜಿಲ್ಲಾ ಖಜಾಂಚಿ ರಾಜ್ಯ ಪರಿಷತ್ ಸದಸ್ಯರ ಚುನಾವಣೆ ನವೆಂಬರ್ 19ರಿಂದ ಡಿಸೆಂಬರ್ 4ರ ವರೆಗೆ ನಡೆಯಲಿದೆ.
ಬೆಂಗಳೂರು ನಗರ ಜಿಲ್ಲೆ ರಾಜ್ಯ ಪರಿಷತ್ ಸದಸ್ಯರ ಮತಕ್ಷೇತ್ರವಾರು ಚುನಾವಣೆ ಸೆಪ್ಟೆಂಬರ್ 17ರಿಂದ ಆರಂಭವಾಗಿದ್ದು, ಡಿಸೆಂಬರ್ 4ಕ್ಕೆ ಮುಕ್ತಾಯವಾಗಲಿದೆ.
ರಾಜ್ಯ ಸಂಘದ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಖಜಾಂಚಿ ಸ್ಥಾನಕ್ಕೆ ಡಿಸೆಂಬರ್ 6ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಡಿಸೆಂಬರ್ 27 ರಂದು ಚುನಾವಣೆ ನಡೆಯಲಿದೆ. ಹೊಸ ವರ್ಷಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಹೊಸ ಅಧ್ಯಕ್ಷರ ಆಯ್ಕೆಯಾಗಲಿದೆ.