ಬೆಂಗಳೂರು: ಕನಿಷ್ಠ ವಿದ್ಯಾರ್ಹತೆ ತೊಡಕು ನಿವಾರಣೆ ಮಾಡಿ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸೇವಾ ಭದ್ರತೆ ಕಲ್ಪಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.
2017ಕ್ಕೆ ಮೊದಲು ನೇಮಕವಾಗಿ ಗ್ರಾಮ ಪಂಚಾಯಿತಿಗಳಲ್ಲಿ ನೀರುಗಂಟಿ, ಜವಾನ, ಸ್ವಚ್ಛತಾಗಾರರಾಗಿ ಕೆಲಸ ಮಾಡುತ್ತಿರುವ 11,543 ಸಿಬ್ಬಂದಿಗೆ ಸೇವಾ ಭದ್ರತೆ ಇರಲಿದೆ.
ಈ ಮೂಲಕ ಹತ್ತಾರು ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಸೌಲಭ್ಯಗಳಿಂದ ವಂಚಿತರಾದ ಗ್ರಾಪಂ ಸಿಬ್ಬಂದಿಗೆ ಸರ್ಕಾರ ಕೊಡುಗೆ ನೀಡಿದೆ. ಕನಿಷ್ಠ ವಿದ್ಯಾರ್ಹತೆ ಇಲ್ಲದ ಕಾರಣಕ್ಕೆ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಜೀವನ ಭದ್ರತೆ ಕಲ್ಪಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ.
ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಜಿಲ್ಲಾ ಪಂಚಾಯಿತಿ ಅನುಮೋದನೆಯಾಗದೆ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ವಿದ್ಯಾರ್ಹತೆ ಹೊರತುಪಡಿಸಿ ಜವಾನರು, ಸ್ವಚ್ಛತಾಗಾರರು, ನೀರುಗಂಟಿಗಳಿಗೆ ವಿದ್ಯಾರ್ಹತೆ ಕೈಬಿಟ್ಟು ವೇತನ ಪಾವತಿ ಹಾಜರಾತಿ ಆಧಾರದಲ್ಲಿ ಒಂದು ಬಾರಿಗೆ ಘಟನೋತ್ತರ ಅನುಮೋದನೆ ನೀಡುವಂತೆ ಪಂಚಾಯತ್ ರಾಜ್ ಆಯುಕ್ತಾಲಯದಿಂದ ಎಲ್ಲ ಜಿಲ್ಲಾ ಪಂಚಾಯಿತಿಗಳಿಗೆ ನಿರ್ದೇಶನ ನೀಡಲಾಗಿದೆ.
ಸೇವಾ ಭದ್ರತೆಯಿಂದ ನೌಕರರಿಗೆ ಅನುಕೂಲವಾಗಲಿದೆ. ಅನುಕಂಪದ ಮೇಲೆ ನೇಮಕಕ್ಕೆ ಅವಕಾಶ, ನಿವೃತ್ತಿ ಉಪದಾನ ಸೌಲಭ್ಯ ಪಡೆಯಬಹುದು. ನಿಗದಿತ ಸಮಯಕ್ಕೆ ನಿಶ್ಚಿತವೇತನ ಕೈಗೆ ಸಿಗಲಿದೆ. ವಿದ್ಯಾರ್ಹತೆಗಳಿಸಿದರೆ ಬಡ್ತಿ ಸೌಲಭ್ಯ ಇರಲಿದೆ. ನೇರವಾಗಿ ಸರ್ಕಾರದಿಂದ ಕನಿಷ್ಠ ವೇತನ ಪಾವತಿಸಲಾಗುವುದು ಎಂದು ಹೇಳಲಾಗಿದೆ.